ಹಾಸನ: ಮದ್ಯಪಾನಿಗಳಿಗು ಸರ್ಕಾರ ಸಕಲ ಸವಲತ್ತುಗಳನ್ನು ನೀಡಿ ಅವರ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಮದ್ಯಪಾನ ಪ್ರಿಯರ ಹೋರಾಟ ಸಂಘದ ಅಧ್ಯಕ್ಷ ವೆಂಕಟೇಶ್ ಆಗ್ರಹ ಮಾಡಿದ್ದಾರೆ.
ಹಾಸನದಲ್ಲಿ ತಮ್ಮ ಸಂಘ ಉದ್ಘಾಟನೆ ಮಾಡೋ ಬಗ್ಗೆ ಮಾತನಾಡಿದ ಅವರು, ಎಣ್ಣೆ ಕುಡಿಯುವವರನ್ನು ಯಾರೂ ಕೂಡ ಕುಡುಕರು ಎನ್ನಬಾರದು, ಮದ್ಯಪ್ರಿಯರು ಎಂದು ಕರೆಯಬೇಕು ಎಂದು ಒತ್ತಾಯಿಸಿದರು. ಮದ್ಯಪಾನ ಪ್ರಿಯರಿಗೆ ಇನ್ಶೂರೆನ್ಸ್ ಸೌಲಭ್ಯ ಒದಗಿಸಬೇಕು. ಮದ್ಯ ಕುಡಿದು ಸಾವನ್ನಪ್ಪಿದರೆ ಆ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು. ಮದ್ಯಪ್ರಿಯರಿಗೆ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು, ಅಕಸ್ಮಾತ್ ಕುಡಿದು ಹೆಚ್ಚಾಗಿ ಬಾರ್‌ನಲ್ಲಿ ಮಲಗಿದರೆ ಅವರನ್ನು ಹೊರಗೆ ಕಳುಹಿಸಬಾರದು, ನಾಲ್ಕು ಗಂಟೆ ಅಲ್ಲೇ ವಿಶ್ರಾಂತಿ ಪಡೆಯಲು ಅವಕಾಶ ನೀಡಬೇಕು ಎಂದು ತಮ್ಮ ಹಕ್ಕೊತ್ತಾಯ ಮಾಡಿದರು.
ಇದಿಷ್ಟೇ ಅಲ್ಲದೆ ರಾಜ್ಯದಲ್ಲಿ ಮದ್ಯಪಾನ ನಿಗಮ ಮಂಡಳಿ ರಚಿಸಬೇಕು, ಮದ್ಯಪಾನ ಪ್ರಿಯರಿಗೆ ನಿವೇಶನ ನೀಡುವುದು ಸೇರಿದಂತೆ ಹದಿನೆಂಟು ಬೇಡಿಕೆಗಳನ್ನು ಈಡೇರಿಸಬೇಕು. ಶೀಘ್ರದಲ್ಲಿಯೇ ಅಧಿಕೃತವಾಗಿ ಮದ್ಯಪಾನ ಪ್ರಿಯರ ಹೋರಾಟ ಸಂಘದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವರು ಸೇರಿದಂತೆ ಏಳೆಂಟು ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಹೇಳಿದ್ದಾರೆ.