Mysore
20
overcast clouds
Light
Dark

ಅಯೋಧ್ಯೆ ಬಾಲರಾಮನ ಮೂರ್ತಿ ಶಿಲೆಗೆ ದಂಡ? ಸ್ಪಷ್ಟನೆ ನೀಡಿದ ಗುತ್ತಿಗೆದಾರ ಶ್ರೀನಿವಾಸ್‌

ಅಯೋಧ್ಯೆಯ ರಾಮಮಂದಿರದ ಬಾಲರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಯಶಸ್ವಿಯಾಗಿದ್ದು, ಈ ಮೂರ್ತಿಯನ್ನು ಕೆತ್ತಿದವರು ಕನ್ನಡಿಗ ಹಾಗೂ ಈ ಶಿಲೆ ದೊರೆತದ್ದು ಕರ್ನಾಟಕದ ನೆಲದಲ್ಲಿ ಎಂಬ ವಿಚಾರ ಕನ್ನಡಿಗರಲ್ಲಿ ಹೆಮ್ಮೆಯನ್ನುಂಟುಮಾಡಿತ್ತು.

ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರದಲ್ಲಿ ರಾಮದಾಸ್‌ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಶಿಲೆ ದೊರೆತಿತ್ತು. ಇನ್ನು ಕೆಲ ದಿನಗಳಿಂದ ರಾಮಮಂದಿರಕ್ಕೆ ಕಳುಹಿಸಲು ಜಮೀನಿನಲ್ಲಿ ಕಲ್ಲು ಹೊರ ತೆಗೆದಿದ್ದಕ್ಕೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಗುತ್ತಿಗೆದಾರ ಶ್ರೀನಿವಾಸ್‌ ನಟರಾಜ್‌ ಎಂಬುವವರಿಗೆ 80000 ದಂಡವನ್ನು ವಿಧಿಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

ಈ ಸುದ್ದಿಗೆ ಇದೀಗ ಗುತ್ತಿಗೆದಾರ ಶ್ರೀನಿವಾಸ್‌ ನಟರಾಜ್‌ ಸ್ಪಷ್ಟನೆ ನೀಡಿದ್ದು, ತಾನು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದಂಡ ಕಟ್ಟಿದ್ದು 2022ರ ಜುಲೈನಲ್ಲಿ ಹಾಗೂ ಬಾಲರಾಮನ ಮೂರ್ತಿಗೆ ಶಿಲೆ ಆಯ್ಕೆಯಾದದ್ದು ಆರು ತಿಂಗಳ ಹಿಂದೆ. ಹೀಗಾಗಿ ತಪ್ಪು ಪ್ರಚಾರ ಮಾಡಬೇಡಿ ಎಂದು ಶ್ರೀನಿವಾಸ್‌ ಹೇಳಿಕೆ ನೀಡಿದ್ದಾರೆ.

ಏನಿದು ಪ್ರಕರಣ?

2022ರಲ್ಲಿ ಜಮೀನಿನ ಮಾಲೀಕ ರಾಮದಾಸ್‌ ನೆಲ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್‌ ನಟರಾಜ್‌ಗೆ ಗುತ್ತಿಗೆ ನೀಡಿದ್ದರು. ಹೀಗೆ ನೆಲಸಮತಟ್ಟು ಮಾಡುವ ವೇಳೆ ಹತ್ತು ಅಡಿ ಆಳದಲ್ಲಿ ಮೂರ್ತಿ ತಯಾರಿಸಲು ಯೋಗ್ಯವಾದ ಕೃಷ್ಣಶಿಲೆ ಪತ್ತೆಯಾಗಿದ್ದವು. ಸಿಕ್ಕ ಶಿಲೆಯನ್ನು ಮೂರು ಭಾಗವಾಗಿ ಮೇಲೆತ್ತೆಲಾಗಿತ್ತು. ಹೀಗೆ ಶಿಲೆಗಳನ್ನು ಮೇಲೆತ್ತಿ ಇಟ್ಟಿದ್ದನ್ನು ಕಂಡವರು ಗಣಿಗಾರಿಕೆ ನಡೆಯುತ್ತಿದೆ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಭಾರೀ ಗಾತ್ರದ ಕಲ್ಲುಗಳನ್ನು ಹೊರತೆಗೆಯಬೇಕಾದರೆ ಅನುಮತಿ ಪಡೆಯಬೇಕು, ಇದು ಅನಧಿಕೃತ ಎಂದು ಗುತ್ತಿಗೆದಾರ ಶ್ರೀನಿವಾಸ್‌ಗೆ ದಂಡ ವಿಧಿಸಿದ್ದರು. ಇದರ ಬಗ್ಗೆ ಅರಿವಿಲ್ಲದೇ ಕಲ್ಲು ಹೊರತೆಗೆದಿದ್ದ ಶ್ರೀನಿವಾಸ್‌ ದಂಡ ಪಾವತಿಸಿದ್ದರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ