Mysore
24
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕೊಡಗಿನಾದ್ಯಂತ ಹುತ್ತರಿ ಸಂಭ್ರಮ

ಧಾನ್ಯಲಕ್ಷ್ಮಿಯನ್ನು ಕರೆ ತಂದು ಮನೆ ತುಂಬಿಸಿಕೊಂಡ ಕೊಡಗಿನ ಜನತೆ

ಮಡಿಕೇರಿ: ಕೊಡಗಿನ ಎಲ್ಲೆಡೆ ಈಗ ಹುತ್ತರಿ ಸಂಭ್ರಮ. ವರ್ಷಪೂರ್ತಿ ಅನ್ನನೀಡೋ ಧಾನ್ಯಲಕ್ಷ್ಮಿಯನ್ನು ಪೂಜಿಸಿ ಮನೆಗೊಯ್ದು ಪೊಲಿ ಪೊಲಿ ದೇವಾ, ಪೊಲಿಯೇ ದೇವಾ ಎಂದು ಶ್ರದ್ಧಾಭಕ್ತಿಯಿಂದ ನಮಿಸುವ ಈ ಹಬ್ಬ ಕೊಡವರ ಪ್ರಮುಖ ಹಬ್ಬ.

ಅಧಿಕೃತವಾಗಿ ಕೊಡಗಿನಾದ್ಯಂತ ಪುತ್ತರಿ ಮಂಗಳವಾರ ರಾತ್ರಿಯಿಂದಲೇ ಆರಂಭವಾಗಿದೆ. ಕೊಡವರ ಕುಲದೈವ ಇಗ್ಗುತಪ್ಪನ ಸನ್ನಿದಿಯಲ್ಲಿ ನೆಲ್ಲಕ್ಕಿಯಲ್ಲಿ ಅಕ್ಕಿ ಹಾಕಿ ನೆರೆಕಟ್ಟುವ ಮೂಲಕ ಇದಕ್ಕೆ ಚಾಲನೆ ನೀಡಲಾಯಿತು.

ಹಬ್ಬದ ಸಂಭ್ರಮದಲ್ಲಿರುವ ಜನರು ಸಾಂಪ್ರದಾಯಿಕ ಉಡುಗೆಯಲ್ಲಿ ಗದ್ದೆಯಿಂದ ತಂದ ಭತ್ತದ ಪೈರನ್ನು ಕಣದಲ್ಲಿರಿಸಿ ಜಾನಪದ ನೃತ್ಯಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಧಾನ್ಯ ಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ವೇಳೆ ಎಲ್ಲರೂ ಸಾಮೂಹಿಕವಾಗಿ ಕೈಯಲ್ಲಿ ಕತ್ತಿ ಹಿಡಿದು ನೃತ್ಯಮಾಡಿದರು. ಹೊಸ ಅರಿ ಎಂದರೆ ಹೊಸ ಭತ್ತವನ್ನು ಮನೆಗೊಯ್ದು ಪೂಜಿಸಿದರು. ಬಳಿಕ ಕದಿರು ತೆಗೆದ ಭತ್ತದಿಂದ ಪಾಯಸ ತಯಾರಿಸಿ ಮನೆ ಮಂದಿ ಮತ್ತು ನೆಂಟರಿಷ್ಟರೆಲ್ಲರೂ ಸೇವಿಸಿ ಸಂಭ್ರಮಿಸಿದರು. ಹುತ್ತರಿಯ ಪ್ರಯುಕ್ತ ತಂಬಿಟ್ಟು, ವಿಶಿಷ್ಟ ಹುತ್ತರಿ ಗೆಣಸು, ಕಡಂಬಿಟ್ಟು ತಯಾರಿಸುತ್ತಾರೆ. ಬೇರೆ ಬೇರೆ ಕಡೆ ನೆಲೆಸಿರುವ ಎಲ್ಲಾ ಕೊಡವರು ಈ ಹಬ್ಬಕ್ಕೆ ಕೊಡಗಿಗೆ ಬಂದು ನೆಂಟರಿಷ್ಟರ ಜತೆ ಕಲೆಯುತ್ತಾರೆ.

ಪ್ರಕೃತಿಯೊಂದಿಗೆ ಹೊಂದಿಕೊಂಡ ಕೊಡಗಿನ ಜನರ ಆಚಾರದ ಸಂಕೇತವಾಗಿ ಐದು ಬಗೆಯ ಹಸಿರು ಮರದ ಎಲೆಗಳಾದ ಉಂಬಳಿ, ಹಲಸು, ಗೇರು, ಮಾವು ಸೇರಿದಂತೆ ಐದು ಬಗೆಯ ಹಸಿರೆಲೆಗಳನ್ನು ಒಟ್ಟುಗೂಡಿಸಿ ನೆರೆಕಟ್ಟಿ ಗುರುಕಾರಣಿಕರಿಗೆ -ದೈವಕ್ಕೆ ನಮಿಸುವುದು ವಾಡಿಕೆ.

ಪ್ರಾಕೃತಿಕ ವಿಕೋಪ ಮತ್ತು ಕೊರೋನಾದಿಂದ ನಲುಗಿದ ಕೊಡಗಿನಲ್ಲಿ ಮೂರು ವರ್ಷಗಳ ಬಳಿಕ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾಗುಲು ಐನ್ ಮನೆಯಲ್ಲಿ ರವೀಂದ್ರ ನೇತೃತ್ವದಲ್ಲಿ ಹುತ್ತರಿ ಹಬ್ಬದ ಆಚರಣೆ ನಡೆಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ