ಮಡಿಕೇರಿ: ಪ್ರಕೃತಿ ಆರೋಗ್ಯಯುತವಾಗಿರಬೇಕಾದರೆ ನಮ್ಮೆಲ್ಲರ ಮೇಲೆ ಹೊಣೆಗಾರಿಕೆ ಹೆಚ್ಚಿರುತ್ತದೆ. ಪ್ರಾಣಿ, ಪಕ್ಷಿಗಳು ಹಾಗೂ ಇತರೆ ಜೀವ ಜಂತುಗಳಿದ್ದರೆ ಮಾತ್ರ ಪರಿಸರ ಸಮತೋಲನದಿಂದ ಕೂಡಿರುತ್ತದೆ. ಪ್ರಸ್ತುತ ದಿನಗಳಲ್ಲಿ ವಾತಾವರಣದಲ್ಲಿನ ಏರುಪೇರಿಗೆ ಮನುಷ್ಯರೇ ಕಾರಣ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.
ಅರಣ್ಯ ಇಲಾಖೆ, ಮಡಿಕೇರಿ ವನ್ಯಜೀವಿ ವಿಭಾಗ, ಭಾಗಮಂಡಲ ವಲಯ ವನ್ಯಜೀವಿ ವಿಭಾಗದ ಸಹಯೋಗದಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ತಲಕಾವೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದಿನದಲ್ಲಿ ಐದು ನಿಮಿಷ ಸಮಯವನ್ನು ಪರಿಸರ ಸ್ವಚ್ಛತೆಗಾಗಿ ಮೀಸಲಿಡಬೇಕು. ಎಲ್ಲರೂ ಕೈಜೋಡಿಸಿದಾಗ ವಾತಾವರಣ ಸ್ವಚ್ಛಂದವಾಗಿರುತ್ತದೆ. ನಾವು ಜಾಗೃತರಾಗುವ ಜತೆಗೆ ಸ್ವಚ್ಛತೆ ಬಗ್ಗೆ ಇತರರಿಗೆ ಅರಿವು ಮೂಡಿಸಬೇಕು ಎಂದು ತಿಳಿ ಹೇಳಿದರು.
ಬಳಿಕ ತಲಕಾವೇರಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ರವಿ ಕಾಳಪ್ಪ ಪಾಲ್ಗೊಂಡರು. ಈ ವೇಳೆ ಕ್ಷೇತ್ರಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಅರಣ್ಯ ರಕ್ಷಕರು, ಇಲಾಖೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಎಸಿಎಫ್ ಶ್ರೀನಿವಾಸ್, ಆರ್‌ಎಫ್‌ಒ ಕೊಟ್ರೇಶ್, ಡಿಆರ್‌ಎಫ್‌ಒಗಳಾದ ಆನಂದ್, ಶ್ರೀಧರ್, ರಾಜ್ಯ ವಿಜ್ಞಾನ ಪರಿಷತ್‌ನ ಟಿ.ಜಿ.ಪ್ರೇಮ್ ಕುವಾರ್ ಹಾಜರಿದ್ದರು.
ತಲಕಾವೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ನಾಪಂಡ ರವಿ ಕಾಳಪ್ಪ ಚಾಲನೆ ನೀಡಿದರು. ಶ್ರೀನಿವಾಸ್, ಕೊಟ್ರೇಶ್, ಆನಂದ್, ಶ್ರೀಧರ್, ಟಿ.ಜಿ.ಪ್ರೇಮ್ ಕುಮಾರ್ ಮತ್ತಿತರರಿದ್ದರು





