ಹಾಸನ: ಜಿಲ್ಲೆಯ ಬೇಲೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇಂದು ಕಾಡಾನೆಯೊಂದನ್ನು ಸೆರೆಹಿಡಿಯಲಾಗಿದೆ.
ಬೇಲೂರು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಶುರುಮಾಡಿದೆ.
ಸಾಕಾನೆಗಳನ್ನು ಬಳಸಿಕೊಂಡು ಪುಂಡಾಟ ಆಡುತ್ತಿರುವ ಆನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ.
ಇಂದು ಏಳು ಕುಮ್ಕಿ ಆನೆಗಳನ್ನು ಬಳಸಿಕೊಂಡು ಎರಡು ಕಾಡಾನೆಗಳನ್ನು ಬೇರ್ಪಡಿಸಿದ್ದಾರೆ.
ನಂತರ ಒಂಟಿಸಲಗ ಕುಸಿದು ಬಿದ್ದಿದ್ದು, ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಕ್ರೇನ್ ಮೂಲಕ ಲಾರಿಗೆ ಶಿಫ್ಟ್ ಮಾಡಿದ್ದಾರೆ.
ಸೆರೆಯಾದ ಆನೆಯು ಸಂಪೂರ್ಣ ಚೇತರಿಕೆಯಾದಾಗ ಬೇರೆ ಕಾಡಿಗೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪುಂಡಾಟ ನಡೆಸುತ್ತಿರುವ ಆನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಬಿಡುವುದಕ್ಕೆ ಸರ್ಕಾರ ಈಗಾಗಲೇ ಸಮ್ಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆಯೂ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿದ್ದು, ಆನೆಗಳ ಹಾವಳಿ ತಡೆಯಲು ಕ್ರಮ ಕೈಗೊಳ್ಳಲಾಗಿದೆ.