ಹಾಸನ : ಹಾಸನದ ಅಧಿದೇವತೆ ಹಸನಾಂಬಾ ದರ್ಶನೋತ್ಸವಕ್ಕೆ ಇಂದು ವಿದ್ಯುಕ್ತ ತೆರೆ ಬಿದ್ದಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ತಾಯಿಯ ವಿಶ್ವರೂಪ ದರ್ಶನದ ಬಳಿಕ ದೇವಿಗೆ ಅಲಂಕಾರ ಮಾಡಿದ್ದ ಒಡವೆಗಳನ್ನು ತೆಗೆದು, ಪೂಜೆ ಸಲ್ಲಿಸಿ ದೇವಿಯ ಮುಂದೆ ದೀಪ ಹಚ್ಚಿ ಹೂವು ಹಾಗೂ ನೈವೇದ್ಯ ಇಟ್ಟು ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಶಾಸಕ ಸ್ವರೂಪ್ ಪ್ರಕಾಶ್, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಯ್ತು.
ಇಂದು ದೇವಾಲಯದ ಬಾಗಿಲು ಮುಚ್ಚುವ ಹಿನ್ನೆಲೆ ನೆನ್ನೆ ದೇವಿಯ ದರ್ಶನಕ್ಕಾಗಿ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು.ಈ ಬಾರಿ 13.5 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದರು. ನೆನ್ನೆ ವಿಶೇಷ ದರ್ಶನದ ಟಿಕೇಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 5,79,56,460 ರೂ ಹಣ ಸಂಗ್ರಹವಾಗಿತ್ತು.
12 ದಿನಗಳ ಕಾಲ ದಿನದ 24 ಗಂಟೆಯೂ ಕೂಡ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದೀಗ ಹಾಸನಾಂಬೆಯ ದರ್ಶನಕ್ಕೆ ಶಾಸ್ತ್ರೋಕ್ತವಾಗಿ ತೆರೆ ಬಿದ್ದಿದ್ದು, ಹಾಸನಾಂಬೆ ಮತ್ತೆ ಒಂದು ವರ್ಷಗಳ ಕಾಲ ತೆರೆ ಮರೆಗೆ ಸರಿದಿದ್ದಾಳೆ.