ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿ ದೊಡ್ಡತಪ್ಲು ಬಳಿ ಭೂಕುಸಿತ ಪ್ರದೇಶಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ಬಳಿಕ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಅವರು, ಮಣ್ಣು ಸಡಿಲವಾಗಿರುವುದರಿಂದ ಗುಡ್ಡ ಪದೇ ಪದೇ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಮಾಹಿತಿ ನೀಡಿದರು.
ಶಿರಾಡಿ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಶಾಕ್ ಆದ ಸಿಎಂ ಸಿದ್ದರಾಮಯ್ಯ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್‌ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.
ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದಕ್ಕೆ ಅಸಮಾಧಾನಗೊಂಡ ಸಿಎಂ ಸಿದ್ದರಾಮಯ್ಯ ಅವರು, ಗುಡ್ಡ ಕುಸಿತಕ್ಕೆ ಇದೇ ನೇರ ಕಾರಣ ಎಂದು ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಗುಡ್ಡ ಕುಸಿತದ ಬಗ್ಗೆ ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಮಾಹಿತಿಗಳನ್ನೆಲ್ಲಾ ನಾವು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಅದರಲ್ಲೂ ಮುಖ್ಯವಾಗಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮನವರಿಕೆ ಮಾಡುತ್ತೇವೆ. ಆದಷ್ಟು ಬೇಗ ಹೆದ್ದಾರಿ ಸರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.