ಹಾಸನ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ ಕರುವೊಂದನ್ನು ಕದ್ದು ಬಾಡೂಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹೆದ್ದುರ್ಗ ಗ್ರಾಮದ ಹೂವಣ್ಣ ಎಂಬುವವರಿಗೆ ಸೇರಿದ್ದ ಕರುವನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಹೊತ್ತೊಯ್ದು ಮಾಂಸದೂಟ ಮಾಡಿದ್ದಾರೆ.
ಕಳೆದ ಮಂಗಳವಾರದಿಂದಲೂ ಕರುವನ್ನು ಹುಡುಕಾಟ ನಡೆಸಿದಾಗ, ಶುಕ್ರವಾರ ಮಡಬಲು ಎಂಬ ಗ್ರಾಮದ ಬಳಿ ಕರುವಿನ ರುಂಡ ಪತ್ತೆಯಾಗಿದೆ.
ಘಟನೆ ಸಂಬಂಧ ಸದ್ಯ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಆರೋಪಿಗಳು ಸಾಕ್ಷ್ಯ ನಾಶಪಡಿಸಲು ಕರುವಿನ ರುಂಡ, ಕರುಳು ಹಾಗೂ ಚರ್ಮವನ್ನು ನದಿಗೆ ಎಸೆಯಲು ಪ್ರಯತ್ನಿಸಿದ್ದರು ಎನ್ನಲಾಗಿದ್ದು, ಅಷ್ಟರಲ್ಲಿ ಬೆಳಗಾಗಿ ಜಮೀನು ಕೆಲಸಕ್ಕೆ ರೈತರು ಬರುತ್ತಿರುವುದನ್ನು ಕಂಡು ಕರುವಿನ ರುಂಡವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.
ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಈ ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಸ್ಥಳೀಯರು ರಾಜ್ಯದಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ದುರಂತವೇ ಸರಿ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.





