ಹಾಸನ: ಹಾಸನದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಸಕಲೇಶಪುರದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.
ಕಳೆದ ಎರಡು ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ ಈಗ ಮತ್ತೆ ತನ್ನ ಆರ್ಭಟ ಶುರುಮಾಡಿದ್ದಾನೆ.
ಹಾಸನದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಸಕಲೇಶಪುರದಲ್ಲಿ ರಸ್ತೆ ಕುಸಿತವಾಗಿದ್ದು, ಹತ್ತಾರು ಹಳ್ಳಿಗಳಿಗೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ.
ಸಕಲೇಶಪುರ ತಾಲ್ಲೂಕಿನ ಕಂಬರಡಿ ಸಮೀಪ ಈ ಘಟನೆ ನಡೆದಿದ್ದು, ರಸ್ತೆ ಸಮೇತ ಭೂಮಿ ಕೊಚ್ಚಿ ಹೋಗಿದೆ. ಇನ್ನು ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿಗಾಗಿ ಕೆಲಸ ಮಾಡಲಾಗಿತ್ತು. ಇದರಿಂದಲೇ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಭೂಕುಸಿತವಾದ ಪರಿಣಾಮ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತವಾಗಿದ್ದು, ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಸಹ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯನ್ನು ಸರಿಪಡಿಸಲು ಮಳೆ ಅಡ್ಡಿಪಡಿಸುತ್ತಿದ್ದು, ಜನತೆ ಮನೆಯಿಂದ ಹೊರಹೋಗಲಾಗದೆ ನರಕಯಾತನೆ ಅನುಭವಿಸುತ್ತಿದ್ದಾರೆ.