Mysore
20
overcast clouds
Light
Dark

ಹಾಸನದ ಮಲೆನಾಡು ಭಾಗದಲ್ಲಿ ಮುಂದುವರೆದ ವರುಣನ ಆರ್ಭಟ

ಹಾಸನ : ಕಳೆದ ೫ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಮಳೆಯ ಹೊಡೆತನಕ್ಕೆ ಜನರ ಜೀವನ ಅಸ್ಯವ್ಯಸ್ತಗೊಂಡಿದೆ. ಅದರಲ್ಲೂ ಮಲೆನಾಡು  ಭಾಗದ ಸಕಲೇಶಪುರ, ಆಲೂರು, ಬೇಲೂರು ಭಾಗಗಳಲ್ಲಿ ವರುಣನ ಆರ್ಭಟಕ್ಕೆ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್‌ ನಲ್ಲಿ ವಾಹನ ಸಂಚಾರ ಕೂಡ ಬಂದ್‌ ಮಾಡಲಾಗಿದೆ.

ಪುನರ್ವಸು ಮಳೆಯ ಆರ್ಭಟಕ್ಕೆ ಹಾಸನ ಜನರು ತತ್ತರಿಸಿ ಹೋಗಿದ್ದು, ಜಿಲ್ಲೆಯ ಕಿರು ಸೇತುವೆಗಳು ತುಂಬಿ ಹರಿದು ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ  ಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಕೆಲವು ಕಡೆ ಗಾಳಿ ಸಹಿತ ಸುರಿಯುತ್ತಿರುವ ಭಾರೀ ಮಳೆಗೆ ಬೃಹತ್‌ ಗಾತ್ರದ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರಿಳಿವೆ. ಸಕಲೇಶಪುರ ತಾಲೂಕಿನ ಬಿಸಿಲೆ, ಕಟ್ಟೆಪುರ, ಮಾಗೇರಿ, ಮಾರನಹಳ್ಳಿ, ಹಾನಬಾಳು, ಹಾಗೂ ಬೇಲೂರು ತಾಲೂಕಿನ ಬಿಕ್ಕೋಡು, ಮಾಳೆಗೆರೆ, ಕುಶಾವರ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಮೂರ್ನಾಲ್ಕು ದಿನಗಳಿಂದ ಕರೆಂಟ್‌ ಇಲ್ಲದೆ ತೊಂದರೆ ಅನುಭವಿಸಿದ್ದಾರೆ.

ಶಿರಾಡಿಘಾಟ್‌ ನ ದೊಡ್ಡತಪ್ಲು ಪ್ರದೇಶದಲ್ಲಿ ಭೂ ಕುಸಿತವಾಗಿರುವ ಕಾರಣ ರಸ್ತೆ ದುರಸ್ತಿ ಆಗುವವರೆಗೂ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿ ಡಿಸಿ ಆದೇಶ ಮಾಡಿದ್ದಾರೆ. ಮಳೆ ಹೆಚ್ಚಾಗಿರುವ ಹಿನ್ನೆಲೆ ಮತ್ತಷ್ಟು ಭೂ ಕುಸಿತದ ಆತಂಕ ಇದ್ದು, ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಚಾರ್ಮಾಡಿ ಘಾಟ್‌ ಮೂಲಕ ಸಂಚರಿಸಲು ಸೂಚಿಸಿಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಹಾಸನ ಜಿಲ್ಲೆಯ ಆರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.