ಹಾಸನ: ಹಾಸನದ ಅಧಿದೇವತೆ ಹಾಸನಾಂಬೆ ತಾಯಿಯ ದರ್ಶನಕ್ಕೆ ಸಾವಿರಾರು ಸಾರ್ವಜನಿಕರು ಆಗಮಿಸಿದ್ದು, ಜಿಟಿ ಜಿಟಿ ಮಳೆಯ ನಡುವೆಯೂ ತಾಯಿಯ ದರ್ಶನ ಪಡೆಯುತ್ತಿದ್ದಾರೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ಬರುವ ಸಾರ್ವಜನಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಹಾಸನದಲ್ಲಿ ಜಿಟಿ ಜಿಟಿ ಮಳೆಯ ನಡುವೆಯೂ ಸಾವಿರಾರು ಸಾರ್ವಜನಿಕರು ಹಾಸನಾಂಬೆ ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ.
ದಿನದ 24 ಗಂಟೆಯೂ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಜನತೆ ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಿದ್ದಾರೆ.
ಇನ್ನು ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಜನರು ಬರುವ ಸಾಧ್ಯತೆಯಿದ್ದು, ಎಲ್ಲರಿಗೂ ಸೂಕ್ತ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.