ಹಾಸನ : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ಅಧಿದೇವತೆ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಸ್ವೀಕರಿಸಿದ್ದಾರೆ.
ದೇವಿಗೆ ಸೀರೆ, ಹೂವು, ಹಣ್ಣು ಗಳನ್ನು ಅರ್ಪಿಸಿ ಭಕ್ತಿ ಪೂರ್ವಕವಾಗಿ ನಮನಗಳನ್ನು ಸಲ್ಲಿಸಿ,ಕೆಲ ಕ್ಷಣ ಕುಮಾರಸ್ವಾಮಿ ದಂಪತಿ ಶಕ್ತಿ ದೇವಿ ಹಾಸನಾಂಬೆಯ ಮುಂದೆ ಧ್ಯಾನಸ್ಥರಾಗಿದ್ದರು. ಈ ವೇಳೆ ಕುಮಾರಸ್ವಾಮಿಯವರಿಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಥ್ ನೀಡಿದ್ದರು.
ದೇವೇಗೌಡರ ಕುಟುಂಬದ ಶಕ್ತಿ ದೇವತೆ ಎಂದೇ ಹೇಳಲಾಗುವ ಹಾಸನಾಂಬೆಯ ದರ್ಶನವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕುಟುಂಬ ಸಮೇತ ಆಗಮಿಸಿ ಪಡೆದಿದ್ದರು. ಪತ್ನಿ ಚೆನ್ನಮ್ಮ ಜೊತೆಯಾಗಿ ಆಗಮಿಸಿದ್ದ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಿಯ ಮುಂದೆ ಧ್ಯಾನಸ್ಥರಾಗಿ ಕುಳಿತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದರು.
ಅಲ್ಲದೆ ಹಾಸನಾಂಬೆಯ ದೇವಸ್ಥಾನದ ಬಾಗಿಲು ತೆರೆದ ಮರುದಿನವೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಪ್ತರ ಜೊತೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದರು.
ದೇವಿಯ ದರ್ಶನ ಆರಂಭವಾದ ದಿನದಿಂದಲೂ ನಿತ್ಯ ಭಕ್ತ ಸಾಗರ ದೇವಸ್ಥಾನದತ್ತ ಹರಿದು ಬರುತ್ತಿದೆ.