ಹಾಸನ : ಇತಿಹಾಸ ಹೊಂದಿರುವ ಹಾಸನಾಂಬ ದೇಗುಲಕ್ಕೆ ಸಮಸ್ಯೆಗೆ ಪರಿಹಾರ ಬೇಡಿಕೊಳ್ಳಲು ಜನ ಬರುತ್ತಾರೆ. ನಾವೂ ಚಿಕ್ಕ ವಯಸ್ಸಿನ ಮಕ್ಕಳಿದ್ದಾಗಿನಿಂದ ದೇವಿ ಆಶೀರ್ವಾದ ಪಡೆಯಲು ಬರುತ್ತಿದ್ದೆವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೆನೆದಿದ್ದಾರೆ.
ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನ ನಂತರ ಮಾತನಾಡಿದ ಅವರು, ಅಂದಿನ ದಿನಗಳು ಇಂದಿಗೂ ನೆನಪಿನಲ್ಲಿವೆ. ನಮಗೆ ಜಾತ್ರೆಗಳಿಗೆ ಹೋಗುವಾಗ ಬಹಳ ಖುಷಿ ಇತ್ತು. ಈಗ ರಾಜ್ಯದಲ್ಲಿ ಗ್ರಾಮೀಣ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಅವಾಂತರದಿಂದ ಬೆಳೆ ನಾಶವಾಗಿದೆ. ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಂಕಷ್ಟ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಹಾಸನಾಂಬೆ ದೇವಿಯ ದರ್ಶನ ಮಾಡಿ ತಾಯಿಯ ಅನುಗ್ರಹ ಕೋರಿದ್ದೇನೆ. ನಾಡಿನಲ್ಲಿ ಸಂಪತ್ತಿನ ಕೊರತೆಯಿಲ್ಲ. ಆದರೆ ಅದು ಸಮಾನವಾಗಿ ಹಂಚಿಕೆಯಾಗಬೇಕು. ನಾಡಿನ ಸಂಪತ್ತು ಸರಿಯಾಗಿ ಸದ್ಬಳಕೆ ಆಗಬೇಕು. ಆಡಳಿತ ಮಾಡುವವರಿಗೆ ಒಳ್ಳೆಯ ಸದ್ಭುದ್ಧಿ ಕೊಟ್ಟು ಆ ತಾಯಿ ಕಾಪಾಡಲಿ ಎಂದು ಆಶಿಸಿದ್ದಾರೆ.
ಮನುಷ್ಯರು ನಾವು ಮಾನವೀಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಸತ್ಯ ಧರ್ಮ ಹಿಂದಿನ ಕಾಲದಲ್ಲಿ ಇತ್ತು ಈಗ ಕಳೆದುಹೋಗುತ್ತಿದೆ. ಮತ್ತೆ ಅಂತಹ ದಿನಗಳು ಬರಲಿ ಎಂದು ವಿಶೇಷವಾಗಿ ಬೇಡಿದ್ದೇನೆ. ನಮ್ಮ ಜೆಡಿಸ್ ಪಕ್ಷಕ್ಕೂ ಹೆಚ್ಚಿನ ಶಕ್ತಿ ಸಿಕ್ಕಿ ಜನತೆಗೆ ನಮ್ಮ ಪಕ್ಷದಿಂದ ಒಳ್ಳೆಯ ಕೆಲಸ ಮಾಡಲು ದೇವಿ ಶಕ್ತಿ ನೀಡಲಿ ಎಂದು ಬೇಡಿದ್ದೇನೆ ಎಂದಿದ್ದಾರೆ.





