ಸಕಲೇಶಪುರ: ಭಾರೀ ಮಳೆಯಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಿರುವ ಹಾಸನ ಜಿಲ್ಲೆ ಸಕಲೇಶಪುರ ಜನತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರೀ ಮಳೆ ಸುರಿದ ಪರಿಣಾಮ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡ್ಡ ಕುಸಿತದಿಂದ ಮನೆಯಲ್ಲೇ ಲಾಕ್ ಆಗಿರುವ ಕೆಲ ಪ್ರದೇಶಗಳ ಜನರು ಅಗತ್ಯ ವಸ್ತುಗಳ ಖರೀದಿಗೆ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ.
ಗುಡ್ಡ ಕುಸಿತ ವರದಿಯಾದ ಬಳಿಕ ಕಳೆದ ಶನಿವಾರ ಸಿಎಂ ಸಿದ್ದರಾಮಯ್ಯ ಅವರು, ಸಕಲೇಶಪುರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ತೆರಳಿದ್ದರು. ಆದರೆ ಸಮಸ್ಯೆ ಪರಿಹಾರಕ್ಕೆ ಸಿಎಂ ಸಿದ್ದರಾಮಯ್ಯ ಯಾವುದೇ ಭರವಸೆ ನೀಡದೇ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯರ ನಡೆ ಜನರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಿಎಂ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯರು ನಿರೀಕ್ಷೆ ಮಾಡಿದ್ದ ಸ್ಪಂದನೆ ಸಿಎಂ ಸಿದ್ದರಾಮಯ್ಯರಿಂದ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಜನತೆ ಕಿಡಿಕಾರಿದ್ದು, ಆದಷ್ಟು ಬೇಗ ಮೂಲಭೂತ ಸೌಕರ್ಯದ ಜೊತೆ ಜೊತೆಗೆ ಗುಡ್ಡ ಕುಸಿತ ಸಂಭವಿಸದ ಹಾಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.