ಹಾಸನ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಗೋವಿನಕೆರೆ ಗ್ರಾಮದಲ್ಲಿ ಚಿರತೆ ದಾಳಿಗೆ ಹಲವು ಕೋಳಿಗಳು ಬಲಿಯಾಗಿವೆ.
ಕಳೆದ ಎರಡು ದಿನಗಳಿಂದಲೂ ಚಿರತೆ ದಾಳಿ ನಡೆಸುತ್ತಿದ್ದು, ದಾಳಿಯ ದೃಶ್ಯ ಮನೆ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಎರಡು ದಿನಗಳಿಂದಲೂ ಮನೆಯ ಮುಂದಿರುವ ಶೆಡ್‌ಗೆ ಬರುತ್ತಿರುವ ಚಿರತೆ ಅಲ್ಲಿರುವ ಕೋಳಿಗಳನ್ನು ಹೊತ್ತುಕೊಂಡು ಹೋಗಿ ತಿಂದು ಹಾಕಿದೆ.
ಮನೆಯ ಸಿಬ್ಬಂದಿ ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಕೋಳಿಗಳನ್ನು ಕದಿಯುತ್ತಿದ್ದಾರೆ ಎಂಬ ಸಂಶಯದಿಂದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ದೃಶ್ಯ ನೋಡುತ್ತಿದ್ದಂತೆ ಗಾಬರಿಯಾದ ಮನೆಯವರು, ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅದೇ ಸ್ಥಳದಲ್ಲಿ ಬೋನು ಅಳವಡಿಸಿದ್ದು, ಚಿರತೆ ಸೆರೆಗಾಗಿ ಕಾದು ಕುಳಿತಿದ್ದಾರೆ.