Mysore
20
overcast clouds
Light
Dark

ಚನ್ನರಾಯಪಟ್ಟಣದ ವಳಗೇರಮ್ಮ ಜಾತ್ರೆಗೆ ಹೊಸ ಮೆರುಗು ನೀಡಿದ ನೂತನ ರಥ

ಚನ್ನರಾಯಪಟ್ಟಣ: ಹಲವು ವಿಶೇಷತೆಗಳನ್ನು ಹೊಂದಿರುವ ಚನ್ನರಾಯಪಟ್ಟಣದ ಗ್ರಾಮ ದೇವತೆ ವಳಗೇರಮ್ಮ ದೇವಸ್ಥಾನಕ್ಕೆ ಇದೀಗ ಹೊಸ ರಥ ಸಮರ್ಪಣೆಯಾಗಿದ್ದು, ಜಾತ್ರಾ ಮಹೋತ್ಸವಕ್ಕೆ ಹೊಸ ಮೆರುಗು ಬಂದಂತಾಗಿದೆ.

15ನೇ ಶತಮಾನದಲ್ಲಿ ಪಾಳೇಗಾರರ ಆಡಳಿತಕ್ಕೆ ಒಳಪಟ್ಟ ಬಳಿಕ ಚನ್ನರಾಯಪಟ್ಟಣ ಎಂಬ ಹೆಸರು ಬಂತು. ಇದಕ್ಕೂ ಮುನ್ನ ಕೊಳತ್ತೂರು, ನಂತರ ಅಮೃತನಾಥಪುರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ಅಮಾನಿಕೆರೆಯ ಮುಂಭಾಗದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಗ್ರಾಮದೇವತೆ ವಳಗೇರಮ್ಮ ದೇವಸ್ಥಾನವಿದೆ. ಪ್ರತಿ ವರ್ಷ ನರಕ ಚತುರ್ದಶಿಯಂದು ಮೂರು ದಿನ ಜಾತ್ರಾ ಮಹೋತ್ಸವದ ವಿಜೃಂಭಣೆಯಿಂದ ಜರುಗುತ್ತದೆ.

ಈ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಚಿಕ್ಕಮ್ಮದೇವಿ ದೇವಸ್ಥಾನ ಇದೆ. ಮೊದಲನೇ ದಿನ ತೇರಿನಲ್ಲಿ ವಳಗೇರಮ್ಮ ದೇವತೆಯನ್ನು ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ರಥೋತ್ಸವ ನಡೆಸಲಾಗುತ್ತದೆ. ಸುತ್ತಲಿನ ಗ್ರಾಮಗಳಾದ ಗೂರಮಾರನಹಳ್ಳಿ, ಗುಂಡಶೆಟ್ಟಿಹಳ್ಳಿ, ಗೂರನಹಳ್ಳಿ ಬಡಾವಣೆ, ಬೆಲಸಿಂದ, ಗಾಣಿಗರಬೀದಿ, ತಗ್ಯಮ್ಮಬಡಾವಣೆ, ಡಿ.ಕಾಳೇನಹಳ್ಳಿ, ಕೆರೆಚಿಕ್ಕೇನಹಳ್ಳಿಯ ಗ್ರಾಮಸ್ಥರು ಬೆಳೆದ ದವಸ, ಧಾನ್ಯಗಳಿಂದ ತುಂಬಿದ ಎತ್ತಿನಗಾಡಿ ಮತ್ತು ರಾಸುಗಳನ್ನು ಸಿಂಗರಿಸಿ, ಹಸಿರು ಬಂಡಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರುವುದು ವಿಶೇಷ. ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ.

ಹರಕೆ ಹೊತ್ತ ಸುಮಂಗಲಿಯರು ಬಾಯಿಬೀಗ ಧರಿಸಿ ಪೂಜೆ ಸಲ್ಲಿಸುತ್ತಾರೆ. ರಥದಿಂದ ದೇವರನ್ನು ಕೆಳಗಿಳಿಸಿ ಉಯ್ಯಾಲೋತ್ಸವ, ಸಿಡಿ ಉತ್ಸವ ಮತ್ತು ಕೊಂಡೋತ್ಸವ ನಡೆಸಲಾಗುತ್ತದೆ. ಮಾರನೇ ದಿನ ಚಂದ್ರಮಂಡಲೋತ್ಸವದಲ್ಲಿ ದೇವಿಯನ್ನು ತೇರಿನಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಮೂರನೇ ದಿನ ದೀಪಾವಳಿಯಂದು ದೇವರಿಗೆ ಪೂಜೆ ಸಲ್ಲಿಸಿ ಅದೇ ದಿನರಾತ್ರಿ ವಾಹನದಲ್ಲಿ ಉತ್ಸವ ನಡೆಸಲಾಗುತ್ತದೆ.