Mysore
15
scattered clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಹನೂರು : ಆದಿವಾಸಿ ಮಹಿಳೆಗೆ ರಾಜ್ಯೋತ್ಸವ ಪ್ರಶಸ್ತಿ

ಹನೂರು: ತಾಲ್ಲೂಕಿನ ಜೀರಿಗೆಗದ್ದೆ ಗ್ರಾಮದ ನಿವಾಸಿ ಮಾದಮ್ಮ ರವರು ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಪಿ ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀರಿಗೆಗದ್ದೆ ಗ್ರಾಮದ ಮಾದಮ್ಮ ಆದಿವಾಸಿ ಮಹಿಳೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹಾಗೂ ಹನೂರು ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಮಾದಮ್ಮರವರು ಬುಡಕಟ್ಟು ಸೋಲಿಗ ಜನಾಂಗಕ್ಕೆ ಸೇರಿದವರಾಗಿದ್ದು ಇವರು 85 ವರ್ಷಗಳನ್ನು ಪೂರೈಸಿ ಆರೋಗ್ಯವಂತರಾಗಿದ್ದಾರೆ. ಈವರಿಗೆ 5 ಮಕ್ಕಳಿದ್ದು ಎಲ್ಲರಿಗೂ ವಿವಾಹ ಮಾಡಿಕೊಟ್ಟಿದ್ದಾರೆ. ಎಂಬತ್ತೈದು ವರ್ಷಗಳ ಇಳಿ ವಯಸ್ಸಿನಲ್ಲೂ ಸಹ ಸಂಘಟನೆ ಹೋರಾಟಗಳಲ್ಲಿ ಭಾಗವಹಿಸುತ್ತಾರೆ .ಸೋಲಿಗ ಅಭಿವೃದ್ಧಿ ಸಂಘದ ಸ್ಥಾಪನೆ ಪ್ರಾರಂಭದಲ್ಲಿ ಅತಿಹೆಚ್ಚಿನ ಮುತುವರ್ಜಿ ವಹಿಸಿ ಅನೇಕ ಭೂಮಿಯ ಹಕ್ಕು ಜೀತ ಪದ್ದತಿ ಸಂದರ್ಭದಲ್ಲಿ ಸೋಲಿಗರನ್ನು ಒಗ್ಗೂಡಿಸಿ ಅನೇಕ ಹೋರಾಟದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮಹಿಳಾ ಮತ್ತು ಸಂಘಟನೆಗಳಲ್ಲಿ ಭಾಗವಹಿಸಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಪ್ರವಾಸವನ್ನು ಕೈಗೊಂಡು ಸಂಘಟನೆಗಳಿಗೆ ಒತ್ತು ನೀಡಿದ್ದಾರೆ ಇವರು ಮೂಲತಃ ಪಾರಂಪಾರಿಕ ಅರಣ್ಯ ಗಿಡಮೂಲಿಕೆಗಳ ಔಷಧ ಉಪಚಾರ ಗಳಲ್ಲಿ ಅನೇಕ ವಿವಿಧ ಕಾಯಿಲೆಗಳಿಗೆ ಔಷಧಿ ಉಪಚಾರವನ್ನು ನೀಡುತ್ತಿರುವ ಅನುಭವವೂ ಸಹ ಇದೆ. ಇಲ್ಲಿಯವರೆಗೆ ಸಾವಿರಾರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿರುವ ಇವರಿಗೆ ಅಪಾರ ಜ್ಞಾನ ಮತ್ತು ಅನುಭವವಿದೆ ಇವರು ಮೂಲತಃ ಆದಿವಾಸಿ ಸೋಲಿಗರ ಕಲೆ ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಒಲವು ತೋರಿ ಇತ್ತೀಚಿನ ಪೀಳಿಗೆಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖರಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಸಹ ಸೋಲಿಗರ ಜನಪದಗೀತೆ, ಗೊರುಕನ ಹಾಡು, ಸೋಬಾನ ಹಾಡು ಹಾಗೂ ಮಾದೇಶ್ವರ ಹಾಡುಗಳನ್ನು ಸ್ವಚ್ಚಂದವಾಗಿ ಹಾಡುವುದು ವಿಶೇಷ. ಇದಲ್ಲದೆ ಗಿಡಮೂಲಿಕೆ ಔಷಧ ಉಪಚಾರಗಳು ಮಂತ್ರಗಳನ್ನು ಈಗಲೂ ಜಪಿಸುವ ಕಲೆಯನ್ನು ಮನಗೊಂಡಿದ್ದಾರೆ.

ಇದೇ ಮೊಟ್ಟ ಮೊದಲ ಬಾರಿಗೆ ಹನೂರು ತಾಲ್ಲೂಕಿನ ಆದಿವಾಸಿ ಮಹಿಳೆ ಮಾದಮ್ಮ ರವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸೋಲಿಗ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು, ಶುಭ ಹಾರೈಸಿದ್ದಾರೆ.

ಒಟ್ಟಾರೆ ಹನೂರು ತಾಲ್ಲೂಕಿನ ಜೀರಿಗೆಗದ್ದೆ ಗ್ರಾಮದ ಮಾದಮ್ಮ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ತಾಲ್ಲೂಕಿನಾದ್ಯಂತ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಘ ಸಂಸ್ಥೆಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!