ಹನೂರು :ಮಲೆ ಮಾದೇಶ್ವರ ವನ್ಯಜೀವಿ ವಲಯವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಯಾವುದೇ ಕಾರಣಕ್ಕೂ ಘೋಷಣೆ ಮಾಡಬಾರದೆಂದು ತಾಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ ಒತ್ತಾಯಿಸಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಲೆ ಮಹದೇಶ್ವರ ವನ್ಯಜೀವಿ ವಲಯವು,906 ಚದುರ ಕಿಲೋಮೀಟರ್ ವಿಸ್ತೀರ್ಣವಿದ್ದು, ಈ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಗ್ರಾಮಗಳಿದ್ದು ಅತಿ ಹೆಚ್ಚು ಗಿರಿಜನ ಹಾಗೂ ಬೇಡಗಂಪಣ ಸಮುದಾಯದವರೇ ವಾಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳ ಕಳೆದರೂ ಸಹ ಇದುವರೆಗೂ ಈ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ಮೊದಲು ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಿ ವಿಶೇಷ ಕಾನೂನು ರೂಪಿಸಬೇಕು, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ಈ ಭಾಗದ ರೈತ ಮುಖಂಡರುಗಳು ಹಾಗೂ ಸ್ಥಳೀಯರ ಅಭಿಪ್ರಾಯ ಪಡೆಯದೆ ಏಕಾಏಕಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಘೋಷಣೆ ಮಾಡಬಾರದು. ಒಂದೊಮ್ಮೆ ಘೋಷಣೆ ಮಾಡಿದರೆ ರೈತ ಸಂಘದ ವತಿಯಿಂದ ಉಗ್ರ ಪ್ರತಿಭಟನೆ ಹಾಗೂ ಜೈಲ್ ಬರೋ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ ಜೋಸೆಫ್ ಹೂವಾರ್ ಎಂಬ ಪರಿಸರವಾದಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇವರು ತಮ್ಮ ಸಂಸಾರದ ಜೊತೆ ಮಲೆ ಮಾದೇಶ್ವರ ವನ್ಯ ಧಾಮದ ಪ್ರದೇಶದಲ್ಲಿ ಸಂಸಾರ ನಡೆಸಿದರೆ ಈ ಭಾಗದ ಜನರ ಕಷ್ಟ ಅರಿವಾಗುತ್ತದೆ ಎಲ್ಲೋ ಕುಳಿತುಕೊಂಡು ಮಾತನಾಡುವುದಲ್ಲ ಎಂದು ಆಕ್ರೋಶ ಹೊರ ಹಾಕಿದರು.
ತಾಲೂಕು ರೈತ ಸಂಘದ ಸಂಘದ ಕಾರ್ಯದರ್ಶಿ ರವಿ ನಾಯ್ಡು ಮಾತನಾಡಿ ಮಲೆ ಮಾದೇಶ್ವರ ವನ್ಯ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡಿದರೆ ನಮ್ಮ ದೇಶಿಯ ತಳಿಗಳು ನಶಿಸಿ ಹೋಗುತ್ತದೆ, ಬಿಳಿಗಿರಿ ರಂಗನ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆ ಮಾಡಿರುವುದರಿಂದ ಸಂಜೆ 6 ರ ನಂತರ ಭಕ್ತಾದಿಗಳಿಗೆ ಪ್ರವೇಶ ನೀಡುತ್ತಿಲ್ಲ, ಅದೇ ರೀತಿ ಇಲ್ಲಿಯೂ ಸಹ ಮಲೆ ಮಹದೇಶ್ವರ ಭಕ್ತಾದಿಗಳಿಗೆ, ಪಾದಯಾತ್ರೆಗಳಿಗೆ ತೀವ್ರ ತೊಂದರೆಯಾಗಲಿದೆ ಆದ್ದರಿಂದ ಈ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಶಿವರಾಮು, ತಾಲೂಕು ಗ್ರಾಮ ಘಟಕ ಅಧ್ಯಕ್ಷ ಅಮ್ಜದ್ ಖಾನ್, ರೈತ ಮುಖಂಡರುಗಳಾದ ರಾಜಣ್ಣ ವೆಂಕಟಾಚಲ ಬಸವರಾಜು ಹಾಜರಿದ್ದರು.





