ಹನೂರು: ತಾಲೂಕು ಆಡಳಿತ ಸೌಧ ನಿರ್ಮಾಣ ಮಾಡಲು ಹುಲ್ಲೇಪುರದ ಬಳಿ ೮.೯೩ ಎಕರೆ ಜಮೀನನ್ನು ಕಾಯ್ದಿರಿಸಲಾಗಿದ್ದು, ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು,
ಬೆಂಗಳೂರಿನ ವಿಧಾನಸಭೆಯ ಅಧೀವೇಶನದಲ್ಲಿ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರ ಪ್ರಶ್ನೆಗೆ ಸಚಿವ ಆರ್.ಅಶೋಕ್ ಉತ್ತರಿಸಿ, ತಾಲೂಕಿನಲ್ಲಿ ಆಡಳಿತ ಸೌಧ ನಿರ್ಮಿಸಲು ಹುಲ್ಲೇಪುರ ಗ್ರಾಮದ ಸರ್ವೇ ನಂಬರ್ ೩೧೨/ಡಿ ರಲ್ಲಿ ೭.೭೬ ಎಕರೆ ಹಾಗೂ ೩೧೨/ಇ ರಲ್ಲಿ ೧.೧೭ ಎಕರೆ ಸೇರಿದಂತೆ ಒಟ್ಟು ೮.೯೩ ಎಕರೆ ಪ್ರದೇಶದಲ್ಲಿ ತಾಲೂಕು ಆಡಳಿತ ಸೌಧ ನಿರ್ಮಿಸಲು ಕಾಯ್ದಿರಿಸಲಾಗಿದ್ದು, ಜಿಲ್ಲಾಧಿಕಾರಿ ಅವರ ಸೂಕ್ತ ಪ್ರಸ್ತಾವನೆಯನ್ನು ಪಡೆದು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಉತ್ತರ ನೀಡಿದ್ದರಲ್ಲದೇ ಈಗಾಗಲೇ ತಹಸೀಲ್ದಾರ್ ಕಚೇರಿ ಉಪ ನೋಂದಣಿ ಕಚೇರಿಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಅಗ್ನಿಶಾಮಕ
ಠಾಣೆ ಹಾಗೂ ಸೆಸ್ಕ್ ಕಚೇರಿಯನ್ನು ಪ್ರಾರಂಭಿಸಲಾಗಿದ್ದು, ಇನ್ನುಳಿದ ಕಚೇರಿಗಳ ಸ್ಥಾಪನೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಗುಂಡಾಲ್ ಜಲಾಶಯದ ಕಾಲುವೆಗಳ ಅಭಿವೃದ್ಧಿಗೆ ಅನುದಾನ ನೀಡಿರುವ ಸಂಬಂಧ ಶಾಸಕ ಆರ್.ನರೇಂದ್ರ ಅವರ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉತ್ತರಿಸಿದ್ದು, ಕಳೆದ ೫ ವರ್ಷದ ಅವಧಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಗುಂಡಾಲ್ ಜಲಾಶಯಗಳ ಕಾಲುವೆಗಳಲ್ಲಿ ಗಿಡಗಂಟಿ ತೆರೆವುಗೊಳಿಸುವುದು, ಹೂಳೆತ್ತುವುದು ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗಾಗಿ ೯೦ ಲಕ್ಷ ರೂ ಅನುದಾನವನ್ನು ನೀಡಲಾಗಿದೆ. ಇದೀಗ ಕೆಲವು ಕಡೆಗಳಲ್ಲಿ ದುರಸ್ತಿ ಕಾರ್ಯ ಆಗಬೇಕಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಗತ್ಯ ಕ್ರಮವಹಿಸಲಾಗಿದೆ ಎಂದು
ತಿಳಿಸಿದ್ದಾರೆ.
ಮುಜರಾಯಿ ಸಚಿವ ಶಶಿಕಲಾ ಜೊಲ್ಲೆ ಅವರು ಉತ್ತರಿಸಿ, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೮೬ ದೇವಸ್ಥಾನಗಳಿಗೆ ೧೦೨ ಲಕ್ಷ ರೂ ಅನುದಾನವನ್ನು ಬಿಡುಗಡೆ
ಮಾಡಲಾಗಿದ್ದು, ಅನುದಾನದ ಬಿಡುಗಡೆಯನ್ನು ಜಿಲ್ಲಾಧಿಕಾರಿ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.





