ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಹುಚ್ಚುನಾಯಿಗಳ ಹಾವಳಿ ಮಿತಿಮೀರಿದ್ದು ಗ್ರಾಮಸ್ಥರು ಹುಚ್ಚು ನಾಯಿ ದಾಳಿಗೆ ತುತ್ತಾಗಿ ಗಾಯಗೊಳ್ಳುತ್ತಿದ್ದಾರೆ.
ಮಾರ್ಟಳ್ಳಿ, ಹಳೇ ಮಾರ್ಟಳ್ಳಿ, ಸಂದನಪಾಳ್ಯ ಹಾಗೂ ಮೆಟ್ಟುತಿರುವು ಗ್ರಾಮದ ಜನರು ಹುಚ್ಚು ನಾಯಿ ದಾಳಿಗೆ ತುತ್ತಾಗಿದ್ದಾರೆ. ಈ ಪೈಕಿ ಹಳೇ ಮಾರ್ಟಳ್ಳಿ ಗ್ರಾಮದ ನಲ್ಲಸ್ವಾಮಿ, ಮಾಜಿ ಅಧ್ಯಕ್ಷ ಗೋವಿಂದ ಅವರ ತಾಯಿ ಹಾಗೂ ಜೋಸೆಫ್ ಹುಚ್ಚು ನಾಯಿ ದಾಳಿಗೆ ತುತ್ತಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾರಂಭದಲ್ಲಿ ಒಂದು ನಾಯಿಗೆ ಹುಚ್ಚು ಹಿಡಿದು ಕಚ್ಚಲು ಪ್ರಾರಂಭ ಮಾಡಿದೆ. ಆದಾದ ಬಳಿಕ ನಿರಂತರವಾಗಿ ಜನರ ಮೇಲೆ ದಾಳಿ ಮಾಡುತ್ತಾ ಬಂದಿದೆ. ಮೊದಲು ಕಚ್ಚಿದ್ದ ಹುಚ್ಚುನಾಯಿ ಇತರೆ ನಾಯಿಗಳಿಗೂ ಕಚ್ಚಿರುವ ಸಾಧ್ಯತೆಯಿದ್ದು, ಒಂದು ನಾಯಿಯಿಂದ ಮತ್ತಷ್ಟು ನಾಯಿಗಳು ಹುಚ್ಚು ಹಿಡಿದಂತಾಗಿ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಇದಕ್ಕೆ ಒಂದು ವಾರದ ಅವಧಿಯಲ್ಲಿ ಏಳರಿಂದ ಎಂಟು ಜನರು ಹುಚ್ಚುನಾಯಿ ದಾಳಿಗೆ ತುತ್ತಾಗಿರುವುದೇ ಸಾಕ್ಷಿ.
ಗ್ರಾಮದಲ್ಲಿ ಮೇಲಿಂದ ಮೇಲೆ ಹುಚ್ಚುನಾಯಿಗಳ ಹಾವಳಿ ಮಿತಿ ಮೀರಿರುವುದು ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಶಾಲೆಗಳ ಆರಂಭವಾದರೆ ಮಕ್ಕಳ ಮೇಲೂ ದಾಳಿ ಮಾಡುವ ಸಾಧ್ಯತೆಯಿದೆ. ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿರುವ ಹುಚ್ಚುನಾಯಿಗಳನ್ನು ಗ್ರಾಮಪಂಚಾಯಿತಿ ಅಧಿಕಾರಿಗಳು ಸೆರೆಹಿಡಿಯಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.





