Mysore
15
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಹನೂರು : ಕೋಡಿ ಬಿದ್ದ ಜಲಾಶಯ ಸಂಚಾರಕ್ಕೆ ಅಡಚಣೆ

ಹನೂರು : ಕಳೆದ ಒಂದು ವಾರದಿಂದ ಬಿಆರ್ ಟಿ ಅರಣ್ಯ ಪ್ರದೇಶ ಹಾಗೂ ಒಡೆಯರಪಾಳ್ಯ ಸುತ್ತಮುತ್ತ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಹುಬ್ಬೆ ಹುಣಸೆ ಜಲಾಶಯ ತುಂಬಿ ಕೋಡಿ ಬಿದ್ದ ಪರಿಣಾಮ ಹನೂರು- ಲೊಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಹನೂರು ಪಟ್ಟಣ ವ್ಯಾಪ್ತಿಯ ಎರಡನೆ ವಾರ್ಡ್ ನಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಸೇತುವೆ ಎರಡನೆ ಬಾರಿ ಕೊಚ್ಚಿಕೊಂಡು ಹೋಗಿರುವ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿದೆ.

ಕಳೆದ 1ತಿಂಗಳ ಹಿಂದೆ ಬಿದ್ದ ಭಾರಿ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿ ತದನಂತರ ಶಾಸಕ ಆರ್ ನರೇಂದ್ರ ಭೇಟಿ ನೀಡಿ ಅಧಿಕಾರಿಗಳಿಗೆ ಶೀಘ್ರವೇ ರಸ್ತೆ ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದ್ದರು ಈ ಹಿನ್ನೆಲೆ ಗುತ್ತಿಗೆದಾರ ದುರಸ್ತಿಪಡಿಸಿದ್ದರು.


ಅಂದಿನಿಂದ ಇಂದಿನವರೆಗೂ ಕಾಮಗಾರಿ ಪ್ರಾರಂಭ ಮಾಡದೆ ಇರುವುದರಿಂದ ಸೇತುವೆ ಕಾಮಗಾರಿ ಅಪೂರ್ಣಗೊಂಡಿದೆ.ಇದರಿಂದ ಸಾರ್ವಜನಿಕರು ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆಗೊಳಗಾಗಿದ್ದಾರೆ.

ಮುಂಜಾಗ್ರತಾ ಕ್ರಮ ಕೈಗೊಳ್ಳಿ : ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಅಧಿಕ ಪ್ರಮಾಣದ ನೀರು ಹೊರ ಬರುತ್ತಿರುವ ಹಿನ್ನೆಲೆ ಲೊಕ್ಕನಹಳ್ಳಿ ಮಾರ್ಗದ ಸೇತುವೆ ಮೇಲೆ ಯಥೇಚ್ಚ ನೀರು ಹರಿಯುತ್ತಿದೆ. ಆದರೂ ಸಹ ದ್ವಿಚಕ್ರ ವಾಹನ ಸವಾರರು ಈ ನೀರಿನಲ್ಲೇ ದುಸ್ಸಾಹಸಕ್ಕೆ ಕೈಹಾಕಿ ಸಂಚಾರ ಮಾಡುತ್ತಿದ್ದಾರೆ ಅಪಾಯ ಅನಾಹುತಗಳು ಸಂಭವಿಸುವ ಮುನ್ನ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಬೇಜವಾಬ್ದಾರಿ ಅಭಿಯಂತರ ಚಿನ್ನಣ್ಣ : ಹನೂರು ಪಟ್ಟಣ ವ್ಯಾಪ್ತಿಯ ಬಂಡಳ್ಳಿ ಮುಖ್ಯ ರಸ್ತೆಯಲ್ಲಿ ಹಾಗೂ ಲೊಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಎರಡು ಸೇತುವೆ ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕ ಆರ್ ನರೇಂದ್ರ ಭೂಮಿಪೂಜೆ ವೇಳೆ ಅಭಿಯಂತರರಿಗೆ ಸೂಚನೆ ನೀಡಿದ್ದರು. ಕಾಮಗಾರಿ ಪ್ರಾರಂಭವಾಗಿ 4 ತಿಂಗಳು ಕಳೆದರೂ ಸಹ ಅಭಿಯಂತರ ಚಿನ್ನಣ್ಣ ಸೂಕ್ತ ಕ್ರಮಕೈಗೊಳ್ಳದೆ ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ. ಇದಲ್ಲದೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದುರಸ್ತಿಗೊಂಡಿರುವ ರಸ್ತೆಗಳ ಬಗ್ಗೆ ಹಲವಾರು ಬಾರಿ ಇಲಾಖೆಗೆ ಮನವಿ ನೀಡಿದ್ದರೂ ಸಹ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಆದ್ದರಿಂದ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ರಸ್ತೆಗೆ ಬಿದ್ದ ಮರ : ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಪೊನ್ನಾಚಿ -ಕೌದಳ್ಳಿ ಮಾರ್ಗದ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಇದರಿಂದ ಶಾಲಾ ಕಾಲೇಜುಗಳು ಹಾಗೂ ದಿನನಿತ್ಯದ ಕಚೇರಿಗಳಿಗೆ ಸೋಗೆಯ ಅಧಿಕಾರಿಗಳಿಗೆ ತೀವ್ರ ತೊಂದರೆಯಾಗಿದೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಮರವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುವಂತೆ ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!