ಹನೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕೆಬ್ಬೆಹುಂಡಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಶಾಲಾ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಮಾಸುತ್ತಿರುವಾಗಲೇ ಕ್ಷೇತ್ರ ವ್ಯಾಪ್ತಿಯ ಕರಿಯನಪುರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.
ಕಳೆದ ಮಂಗಳವಾರ ಕರಿಯನ ಪುರದ ರಾಚಯ್ಯ ಎಂಬುವರ ಹಸುವನ್ನು ಚಿರತೆ ಬೇಟೆಯಾಡಿ ತಿಂದು ಹೋಗಿದ್ದ ಘಟನೆಮಾಸುತ್ತಿರುವಾಗಲೇ ಮತ್ತೊಮ್ಮೆ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಘಟನೆ ಜರುಗಿದೆ.
ಚಿಕ್ಕಿಂದು ವಾಡಿ ಗ್ರಾಮದಿಂದ ಪಾಳ್ಯ ಗ್ರಾಮಕ್ಕೆ ತೆರಳುವ ರಸ್ತೆಯ ಮಾರ್ಗ ಮಧ್ಯ ಪುಟ್ಟಪ್ಪನಕೆರೆ ಬಳಿ ಚಿರತೆಯನ್ನು ನೋಡಿದ ಬೈಕ್ ಸವಾರರು ಹೆದರಿ ಘಟನೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಪದೇಪದೇ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಕೇಳಿರುವ ಗ್ರಾಮಸ್ಥರು ಜೊತೆಗೆ ಹಸು ಬೇಟೆಯಾಡಿ ತಿಂದಿರುವ ಘಟನೆಯನ್ನು ಮೆಲಕು ಹಾಕುತ್ತಾ ಭಯದಿಂದಲೇ ತಮ್ಮ ಜಮೀನುಗಳಿಗೆ ತೆರಳುತ್ತಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕರೀನಾಪುರ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಹಸುವಿನ ಮಾಲೀಕರಿಗೆ ಈಗಾಗಲೇ ಪರಿಹಾರ ನೀಡಿದ್ದೇವೆ. ಪ್ರತ್ಯಕ್ಷವಾಗುತ್ತಿರುವುದು ಗಮನಕ್ಕೆ ಬಂದಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಂದಿನಿಂದಲೇ ರಾತ್ರಿಗಸ್ತು ಪ್ರಾರಂಭಿಸಿ ಚಿರತೆಯ ಚಲನ ವಲನದ ಬಗ್ಗೆ ಬಗ್ಗೆ ನಿಗ ಇಡಲಾಗುವುದು. ನಂತರ ಚಿರತೆ ಕಾಣಿಸಿಕೊಂಡಲ್ಲಿ ಚಿರತೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರೈತರು ಹಾಗೂ ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಒಬ್ಬರೇ ಓಡಾಡಬಾರದು. ಅನಿವಾರ್ಯ ಸಂದರ್ಭಗಳಲ್ಲಿ ಒಬ್ಬರೇ ಹೋಗಬೇಕಾದರೆ ಸದ್ದು ಮಾಡಿಕೊಂಡು ತೆರಳಿ ಇಲಾಖೆಗೆ ಸಹಕರಿಸಬೇಕು ಎಂದು ಹನೂರು ವಲಯದ ಬಫರ್ ಆರ್‌ಎಫ್ಓ ಪ್ರವೀಣ್ ಪತ್ರಿಕೆಗೆ ತಿಳಿಸಿದ್ದಾರೆ.