Mysore
20
overcast clouds
Light
Dark

ಸ್ಮಶಾನವಿಲ್ಲದ ಅಂಬಿಕಾಪುರ ಗ್ರಾಮದಲ್ಲಿ ಹಳ್ಳದಲ್ಲಿಯೇ ಅಂತ್ಯಕ್ರಿಯೆ

ಹನೂರು: ಸತ್ತರೂ ಚಿಂತೆ, ಇದ್ದರೂ ಚಿಂತೆ ಎಂಬ ಮಾತಿಗೆ ಈ ಊರು ಉದಾಹರಣೆಯಂತಿದೆ. ಇಲ್ಲಿನ ಜನರು ಯಾರಾದರೂ ಮೃತಪಟ್ಟರೆ ಸ್ಮಶಾನದ ಬದಲು ಹಳ್ಳದತ್ತ ಶವವನ್ನು ಒಯ್ಯುತ್ತಾರೆ. ಏಕೆಂದರೆ ಗ್ರಾಮದ ಜನರಿಗೆ ಸತ್ತವರನ್ನು ಹೂಳಲು ಸ್ಮಶಾನವೇ ಇಲ್ಲ.

ಇದು ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಂಬಿಕಾಪುರ ಗ್ರಾಮಸ್ಥರ ವ್ಯಥೆಯ ಕಥೆ. ಶನಿವಾರ ಗ್ರಾಮದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಇದೇ ಹಳ್ಳದ ಬಳಿ ಮಣ್ಣು ಮಾಡಲಾಗಿದೆ. ಕಳೆದ ವಾರ ಈ ಜಾಗದಲ್ಲಿ ಮಣ್ಣು ಮಾಡಿದ ಶವವೊಂದು ನೆರೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈ ಶವವೂ ಕೊಚ್ಚಿ ಹೋಗಬಹುದೇ ಎನ್ನುವ ಆತಂಕ ಗ್ರಾಮಸ್ಥರಲ್ಲಿದೆ.

ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಆದಿ ಜಾಂಬವ ಮತ್ತು ಪರಿಶಿಷ್ಟ ಜಾತಿ ಸಮುದಾಯದವರಿಗೆ ಸ್ಮಶಾನ ವ್ಯವಸ್ಥೆ ಇಲ್ಲ. “”ನಮ್ಮ ಸಮುದಾಯದ ವ್ಯಕ್ತಿ ಸತ್ತರೇ ನಮಗೆ ಅಂತ್ಯಕ್ರಿಯೆ ಮಾಡಲು ಉಡುತೊರೆ ಹಳ್ಳವೇ ಗತಿ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ನಮಗೆ ಸ್ಮಶಾನ ವ್ಯವಸ್ಥೆ ಕಲ್ಪಿಸಿಲ್ಲʼʼ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ವಾರ ಗ್ರಾಮದ ಪಾಪಮ್ಮ ಅವರ ಮಗ ಷಣ್ಮುಗ ಎಂಬುವವರು ಮೃತಪಟ್ಟಿದ್ದರು. ಸ್ಮಶಾನವಿಲ್ಲದೇ ಉಡುತೊರೆ ಹಳ್ಳದ ಬಳಿ ಅಂತ್ಯಕ್ರಿಯೆ ಮಾಡಲಾಗಿತ್ತು. ಸತತ ಮಳೆಯಿಂದಾಗಿ ಉಡುತೊರೆ ಹಳ್ಳ ತುಂಬಿ ಹರಿದ ಪರಿಣಾಮ ಹೂತು ಹಾಕಿದ್ದ ಶವವೇ ನೀರಿನ ರಭಸಕ್ಕೆ ಕೊಚ್ಚಿ ಹೋಯಿತು. ಶನಿವಾರ ಪಳನಿಯಮ್ಮ(54) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನುಇದೇ ಹಳ್ಳದಲ್ಲಿ ನೆರವೇರಿಸಲಾಗಿದೆ. ಮತ್ತೊಮ್ಮೆ ಹಳ್ಳ ತುಂಬಿ ಹರಿದರೆ ಈ ಶವವೂ ನೀರಿನಲ್ಲಿ ಕೊಚ್ಚಿಹೋಗುವ ಆತಂಕದಲ್ಲಿದ್ದಾರೆ ಗ್ರಾಮಸ್ಥರು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮಗೆ ಯಾವುದೆ ಸೌಲಭ್ಯ ಕೊಡದಿದ್ದರೂ ಸ್ಮಶಾನ ವ್ಯವಸ್ಥೆ ಕಲ್ಪಿಸಿ ಸತ್ತವರಿಗೆ ಮುಕ್ತಿ ಕಲ್ಪಿಸಿ ಎಂದು ಇತ್ತೀಚೆಗೆ ಮಗನನ್ನು ಕಳೆದುಕೊಂಡ ಷಣ್ಮುಖ ಅವರ ತಾಯಿ ಗೋಳಾಡುತ್ತಿದ್ದಾರೆ.

ಗ್ರಾಮದಲ್ಲಿ ಸೂಕ್ತ ಸ್ಮಶಾನ ವ್ಯವಸ್ಥೆ ಮಾಡದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಮಶಾನವಿಲ್ಲದ ಗ್ರಾಮಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ.ಈಗಾಗಲೇ ಸರ್ಕಾರಿ ಜಮೀನು ಇರುವ ಕಡೆ ಸರ್ವೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹನೂರು ತಾಲ್ಲೂಕು ತಹಸೀಲ್ದಾರ್ ಆನಂದಯ್ಯ ತಿಳಿಸಿದ್ದಾರೆ.

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಮಶಾನ ವಿಲ್ಲದ ಗ್ರಾಮಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ.ಈಗಾಗಲೇ ಸರ್ಕಾರಿ ಜಮೀನು ಇರುವ ಕಡೆ ಸರ್ವೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಆದಷ್ಟು ಬೇಗ ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಕಲ್ಪಿಸಲಾಗುವುದು. -ಆನಂದಯ್ಯ, ತಹಸೀಲ್ದಾರ್ ಹನೂರು ತಾಲ್ಲೂಕು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ