ಗುಂಡ್ಲುಪೇಟೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಿ.ಪಿ.ರಾಜರತ್ನಂ ಸಭಾಂಗಣದಲ್ಲಿ ಬುಧವಾರ 13ನೇ ರಾಷ್ಟ್ರೀಯ ಮತದಾರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಪಟ್ಟಣದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ತಳವಾರ್ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಮತದಾನವನ್ನು ಚಲಾಯಿಸುವ ಹಕ್ಕು ಹೊಂದಿರುವ ಪ್ರತಿಯೊಬ್ಬರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಮಾಡುವ ಉದ್ದೇಶದಿಂದ 2011 ರಿಂದ ಪ್ರಾರಂಭಗೊಂಡಂತೆ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಯುವ ಮತದಾರರು ತಮ್ಮ ಜನಪ್ರತಿಯಾಗಿ ಯಾರು ಆಯ್ಕೆಯಾಗಬೇಕು ಎಂಬುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಮತದಾನ ಮಾಡಬೇಕು. ಇಂದಿನ ಪೀಳಿಗೆ ಮತದಾನದ ಪ್ರಾಮುಖ್ಯತೆಯನ್ನು ಅರಿಯಬೇಕಾಗಿದೆ ಎಂದರು.
ತಾಲೂಕು ತಹಸಿಲ್ದಾರ್ ಸಿ.ಜಿ.ರವಿಶಂಕರ್ ಪ್ರತಿಜ್ಞಾವಿಧಿ ಬೋಧಿಸಿದರು. ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಕುಮಾರ್, ಅಪರ ಸಿವಿಲ್ ನ್ಯಾಯಾಧೀಶರಾದ ಕಾಂತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ತಾಪಂ ಇಓ ಶ್ರೀಕಂಠ ರಾಜ ಅರಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ವಕೀಲರ ಸಂಘದ ಅಧ್ಯಕ್ಷರಾದ ವೆಂಕಟೇಶ್, ಅಧಿಕಾರಿಗಳು, ವಕೀಲರು, ಶಿಕ್ಷಕರು ಹಾಜರಿದ್ದರು.