ಮಂಡ್ಯ: ರೈತರು ಭತ್ತ, ಕಬ್ಬು ಬೆಳೆದು ಶ್ರೀಮಂತರಾಗಿರೋದು ಬಹಳ ಕಡಿಮೆ. ಆದ್ದರಿಂದ ಶ್ರೀಗಂಧ ಬೆಳೆ ಬೆಳೆದು ಶ್ರೀಮಂತರಾಗಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಮರ ನಾರಾಯಣ್ ಸಲಹೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘ, ಬೆಂಗಳೂರು ಮತ್ತು ಒಐಎಸ್‌ಸಿಎ ಇಂಟರ್ ನ್ಯಾಷನಲ್ ಕರ್ನಾಟಕ ವಲಯದವರ ಸಂಯುಕ್ತಾಶ್ರಯದಲ್ಲಿ 2022-23 ನೇ ಸಾಲಿನ ಆತ್ಮ ಯೋಜನೆಯಡಿ ಶ್ರೀಗಂಧ, ವನಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತು ತರಬೇತಿ ಹಾಗೂ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯದಲ್ಲಿ 51 ಭಾಗ ನೀರಾವರಿ ಜಮೀನು ಇದೆ. 42 ಸಾವಿರ ಹೆಕ್ಟೇರ್ ಖುಷ್ಕಿ ಭೂಮಿ ಇದೆ. ರೈತರು ನೀರಾವರಿ ಇಲ್ಲದ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆ ಬೆಳೆದು ಆರ್ಥಿಕವಾಗಿ ಲಾಭ ಪಡೆದುಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಅಂದಿನ ಮೈಸೂರಿನ ರಾಜರು ಹೆಚ್ಚಾಗಿ ಸಿಗುತ್ತಿದ್ದ ಶ್ರೀಗಂಧ ಬೆಳೆುಂನ್ನು ಕಂಡು ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ ಕಾರ್ಖಾನೆಗೆ ಬುನಾದಿ ಹಾಕಿದರು. ಅದರ ಪರಿಣಾಮ ಇಂದು ದೇಶ ವಿದೇಶಗಳಲೆಲ್ಲಾ ಶ್ರೀಗಂಧದ ಬೆಳೆ ಶ್ರೀಮಂತವಾಗಿದೆ. ಇಡೀ ಭಾರತದಲ್ಲೇ ಕರ್ನಾಟಕ ಶೇ.71 ಶ್ರೀಗಂಧ ಪೂರೈಸುತ್ತಿದೆ. ಈ ನಿಟ್ಟಿನಲ್ಲಿ ರೈತರು ಶ್ರೀಗಂಧದ ಬೆಳೆಯ ಬಗ್ಗೆ ತಿಳಿದುಕೊಂಡು ಶ್ರೀಗಂಧ ಬೆಳೆಯಬೇಕಿದೆ ಎಂದರು.
ಜಿಪಂ ಸಿಇಒ ಶಾಂತ ಎಲ್.ಹುಲ್ಮನಿ ಮಾತನಾಡಿ, ಪ್ರಗತಿಪರ ರೈತರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿರುವ ವಿಧಾನ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆ ಕುರಿತ ಯಶೋಗಾಥೆಗಳನ್ನು ಇತರೆ ರೈತರೊಂದಿಗೆ ಹಂಚಿಕೊಳ್ಳಿ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಆಡಳಿತ)ಎಂ.ಬಾಬು, ಸಂಜೀವಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆ ನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ, ಕೃಷಿ ಇಲಾಖೆ ವಿಷುಯ ತಜ್ಞೆ ಸುಚಿತ್ರ ಮತ್ತಿತರರು ಹಾಜರಿದ್ದರು.
ಶ್ರೀಗಂಧದ ಕೃಷಿಯಲ್ಲಿ ಅತಿಥಿ ಸಸ್ಯ ಉಪಯೋಗಿಸುವ ಗೊಬ್ಬರ, ಗಿಡಗಳ ನಡುವೆ ಅಂತರ, ರೋಗ ನಿಗ್ರಹ ಕುರಿತಂತೆ ರೈತರಿಗೆ ಮಾಹಿತಿ ಕೈಪಿಡಿ ಒದಗಿಸಬೇಕು.
–ಅಮರ ನಾರಾಯಣ್, ಅಧ್ಯಕ್ಷರು, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘ.





