ಸೋರಿಕೆಯಾಗಿದ್ದ ಸಿಲಿಂಡರ್ ವಾಪಸ್
ತಿ.ನರಸೀಪುರ: ಪಟ್ಟಣದ ನೀರು ಶುದ್ಧೀಕರಣ ಘಟಕದಲ್ಲಿ ಅಲ್ಪ ಪ್ರಮಾಣದಲ್ಲಿ ಕ್ಲೋರಿನ್ ಸೋರಿಕೆಯಾಗಿದ್ದ ಸಿಲಿಂಡರ್ ಅನ್ನು ಕಂಪೆನಿಗೆ ಹಿಂತಿರುಗಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜು ‘ಆಂದೋಲನ’ಕ್ಕೆ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು, ಸಿಲಿಂಡರ್‌ನಲ್ಲಿ ನೀರು ಕಡಿಮೆ ಆಗಿದ್ದರಿಂದ ಅತ್ಯಂತ ಸಣ್ಣ ಮಟ್ಟದಲ್ಲಿ ಸೋರಿಕೆಯಾಗಿದೆ. ಯಾವುದೇ ಅನಾಹುತ ಆಗಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ಶುದ್ಧೀಕರಣ ಘಟಕದ ಸಮೀಪವಿರುವ ೧೫ ಮನೆಗಳ ಕುಟುಂಬದವರನ್ನು ಸ್ಥಳಾಂತರಿಸಲಾಗಿತ್ತು. ಅವರೆಲ್ಲರನ್ನೂ ಈಗ ಮತ್ತೆ ಮನೆಗೆ ಕಳುಹಿಸಲಾಗಿದೆ. ಎಲ್ಲವೂ ಸರಿಯಾಗಿದೆ. ಸೋರಿಕೆಯಾಗಿದ್ದು ಹೆಚ್ಚುವರಿ ಸಿಲಿಂಡರ್. ಇದನ್ನು ಕಂಪೆನಿಗೆ ಹಿಂತಿರುಗಿಸಲಾಗಿದ್ದು, ಹೊಸ ಸಿಲಿಂಡರನ್ನು ನೀಡಲಿದ್ದಾರೆ ಎಂದರು.
ಕ್ಲೋರಿನ್ ಸೋರಿಕೆಯಿಂದ ಯಾವುದೇ ಅನಾಹುತಗಳು ಆಗುವುದಿಲ್ಲ. ಸೋರಿಕೆಯಿಂದ ಕಣ್ಣು ಉರಿ, ಮೈ ಕೆರೆತ, ಅಲರ್ಜಿ, ಕೆಮ್ಮು ಮುಂತಾದ ಸಣ್ಣಪುಟ್ಟ ಸಮಸ್ಯೆಗಳಾಗುತ್ತವೆ. ಕಳೆದ ವರ್ಷ ಸೋರಿಕೆಯಾಗಿದ್ದಂತೆ ಶುಕ್ರವಾರ ಸೋರಿಕೆ ಆಗಿಲ್ಲ. ಆದ್ದರಿಂದ ಯಾವುದೇ ಆತಂಕ ಬೇಡ.
-ಡಾ.ರವಿಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ, ತಿ.ನರಸೀಪುರ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕ್ಲೋರಿನ್ ಸೋರಿಕೆಯಾಗಿದೆ. ಕಳೆದ ವರ್ಷವೇ ಸೋರಿಕೆಯಾಗಿದ್ದಾಗ ಎಚ್ಚೆತ್ತುಕೊಂಡು ಗಮನಹರಿಸಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಈಗಲಾದರೂ ಸಿಲಿಂಡರ್ ಗಳನ್ನು ಅಳವಡಿಸುವಾಗ ಸಂಪೂರ್ಣವಾಗಿ ಪರಿಶೀಲಿಸಿ ಅಳವಡಿಸಬೇಕು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಪ್ಲಾಂಟ್‌ಅನ್ನು ಇಲ್ಲಿಂದ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರಲ್ಲದೆ,ಆಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
-ಗುರುಮೂರ್ತಿ, ತಿ. ನರಸೀಪುರ.





