Mysore
20
overcast clouds
Light
Dark

ನಕಲಿ ಬ್ಯಾಂಕ್ ಚಲನ್ ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ

ನಗರಪಾಲಿಕೆಯಲ್ಲಿ ಮಧ್ಯವರ್ತಿಯಿಂದ ಲಕ್ಷಾಂತರ ರೂ. ಗುಳುಂ: ತನಿಖೆಗೆ ಸಮಿತಿ

ವರದಿ: ಎಚ್.ಎಸ್.ದಿನೇಶ್‌ಕುಮಾರ್

ಮೈಸೂರು: ಮಧ್ಯವರ್ತಿಗಳ ಮೂಲಕ ನಗರಪಾಲಿಕೆಯ ಕೆಲಸಗಳನ್ನು ಮಾಡಬೇಡಿ ಎಂದು ಎಷ್ಟೇ ಹೇಳುತ್ತಿದ್ದರೂ ಅವರು ಕೇಳುತ್ತಿಲ್ಲ. ಇದೀಗ ಮಧ್ಯವರ್ತಿಯೋರ್ವ ನಕಲಿ ಬ್ಯಾಂಕ್ ಚಲನ್ ಸೃಷ್ಟಿಸಿ ಸಾರ್ವಜನಿಕರ ಲಕ್ಷಾಂತರ ರೂ. ಹಣವನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣದ ತನಿಖೆಗಾಗಿ ನಗರಪಾಲಿಕೆ ಆಯುಕ್ತರು ಸಮಿತಿಯನ್ನು ರಚಿಸಿದ್ದಾರೆ.

ಸ್ವಲ್ಪ ಹಣ ನೀಡಿದಲ್ಲಿ ನಮ್ಮ ಕೆಲಸ ಸುಲಭವಾಗುತ್ತದೆ ಎಂಬ ಕಾರಣಕ್ಕಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸುವ ಕೆಲವರು ನಗರಪಾಲಿಕೆಗೆ ಪಾವತಿಸಬೇಕಾದ ತೆರಿಗೆ ಹಣ, ನಕ್ಷೆ ಶುಲ್ಕ, ಟ್ರೇಡ್ ಲೈಸನ್ಸ್ ಹೀಗೆ ಕೆಲ ಶುಲ್ಕ ಪಾವತಿಗೆಂದು ಮಧ್ಯವರ್ತಿಗೆ ಹಣ ನೀಡಿ ಇದೀಗ ಪೇಚಿಗೆ ಸಿಲುಕಿದ್ದಾರೆ.

ಮೂರು ದಿನಗಳ ಹಿಂದೆ ನಗರಪಾಲಿಕೆ ಸದಸ್ಯರೊಬ್ಬರು ಆುುಂಕ್ತ ಲಕ್ಷ್ಮೀಕಾಂತರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಮಧ್ಯವರ್ತಿಯೋರ್ವ ನಗರಪಾಲಿಕೆಗೆ ಪಾವತಿಸಬೇಕಾದ ಹಣವನ್ನು ಪಾವತಿಸದೆ ವಂಚಿಸಿರುವ ಕುರಿತು ದಾಖಲೆಗಳನ್ನು ನೀಡಿ ಇಡೀ ಪ್ರಕರಣವನ್ನು ತನಿಖೆ ನಡೆಸುವಂತೆ ಕೋರಿದ್ದರು.

ಅಕ್ರಮ ಹೇಗೆ?: ಜನರು ತೆರಿಗೆ ಪಾವತಿಗಾಗಿ ಹಣದೊಂದಿಗೆ ನಗರಪಾಲಿಕೆಯ ವಲಯ ಕಚೇರಿಗೆ ಬಂದ ವೇಳೆ ಅವರುಗಳನ್ನು ಪರಿಚಯಿಸಿಕೊಳ್ಳುವ ಮಧ್ಯವರ್ತಿಯ, ನಿಮ್ಮ ಹಣವನ್ನು ನಾನೇ ಪಾವತಿಸುತ್ತೇನೆ ಎಂದು ನಂಬಿಸುತ್ತಾನೆ. ಆತನ ಮಾತನ್ನು ನಂಬುವ ಅವರು ನಗರಪಾಲಿಕೆಗೆ ಪಾವತಿಸಬೇಕಾದ ಹಣವನ್ನು ಆತನ ಕೈಗಿಡುತ್ತಾರೆ.

ಕೆಲ ಸಮುಂದ ನಂತರ ವಾಪಸ್ ಬರುವ ಆತ ಹಣ ಪಾವತಿಸಿದ ಬ್ಯಾಂಕ್ ಚಲನ್ ನೀಡುತ್ತಾನೆ. ಅದರ ಒಂದು ಪ್ರತಿಯನ್ನು ವಾಲೀಕರಿಗೆ ನೀಡುತ್ತಾನೆ. ಮತ್ತೊಂದು ಪ್ರತಿಯನ್ನು ನಗರಪಾಲಿಕೆ ಸಿಬ್ಬಂದಿಗೆ ನೀಡುತ್ತಾನೆ. ವಾಲೀಕರ ಮುಂದೆಯೇ ನಗರಪಾಲಿಕೆ ಸಿಬ್ಬಂದಿಗೆ ಚಲನ್ ನೀಡುವ ಕಾರಣ ಮಧ್ಯವರ್ತಿಯನ್ನು ನಂಬಿ ಗ್ರಾಹಕರು ಅಲ್ಲಿಂದ ತೆರಳುತ್ತಾರೆ.

ಆದರೆ, ಅತ ನೀಡಿರುವುದು ನಕಲಿ ಚಲನ್ ಎಂಬುದು ಮಾಲೀಕರುಗಳಿಗೆ ತಿಳಿಯುವುದೇ ಇಲ್ಲ. ಆತ ತಾನೇ ಸಿದ್ಧಪಡಿಸಿಕೊಂಡಿರುವ ನಕಲಿ ಸೀಲ್‌ನ್ನು ಚಲನ್‌ಗೆ ಹಾಕಿ ಮಾಲೀಕರು ಹಾಗೂ ನಗರಪಾಲಿಕೆ ಸಿಬ್ಬಂದಿಗೆ ನೀಡುತ್ತಾನೆ. ನಗರಪಾಲಿಕೆ ಸಿಬ್ಬಂದಿಗೂ ಕೂಡ ನಾವು ನಕಲಿ ಚಲನ್ ಪಡೆದಿದ್ದೇವೆ ಎಂಬುದು ತಕ್ಷಣಕ್ಕೆ ತಿಳಿಯುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಯು ಮನೆ ಅಥವಾ ನಿವೇಶನ ಮಾಲೀಕರ ಲಕ್ಷಾಂತರ ರೂ.ಗಳನ್ನು ಗುಳುಂ ಮಾಡಿದ್ದಾನೆ.

ಸಿಬ್ಬಂದಿಗಳ ಕೈವಾಡವಿದೆಯೇ?: ತನಿಖೆಯ ನಂತರವಷ್ಟೇ ಸತ್ಯ ಹೊರಬರಲಿದೆ. ಮದ್ಯವರ್ತಿಗಳು ಹಾಗೂ ವಲುಂ ಕಚೇರಿ ಮುಂಭಾಗ ಕೂರುವ ಮಧ್ಯವರ್ತಿಗಳ ನಡುವೆ ಮೊದಲಿನಿಂದಲೂ ಸಂಬಂಧ ಚೆನ್ನಾಗಿಯೇ ಇದೆ. ಖಾತೆ, ಕಂದಾಯ, ವಾಸದೃಢೀಕರಣ ಹೀಗೆ ಸಾಕಷ್ಟು ಕೆಲಸಗಳಿಗೆ ಸಿಬ್ಬಂದಿ ಹಾಗೂ ಜನರ ನಡುವೆ ಸೇತುವೆಯಂತೆ ಕೆಲಸ ನಿರ್ವಹಿಸುವುದು ಇದೇ ಮಧ್ಯವರ್ತಿಗಳು. ಹೀಗಾಗಿ ನಕಲಿ ಬ್ಯಾಂಕ್ ಚಲನ್ ಸೃಷ್ಟಿಸಿ ಲಕ್ಷಾಂತರ ರೂ. ಹಣವನ್ನು ಮಧ್ಯವರ್ತಿ ಗುಳುಂ ಮಾಡಿದ್ದಾನೆ ಎಂದಾದಲ್ಲಿ ಆತನಿಗೆ ನಗರಪಾಲಿಕೆ ಸಿಬ್ಬಂದಿಗಳ ಸಹಕಾರವಿಲ್ಲ ಎಂದು ಹೇಳುವುದು ಕಷ್ಟ ಎಂದು ಜನರು ಹೇಳುತ್ತಾರೆ.

ಮಾಲೀಕರಿಗೆ ನೋಟೀಸ್: ಮಧ್ಯವರ್ತಿಯನ್ನು ನಂಬಿ ಮೋಸಹೋದ ಜನರಿಗೀಗ ನೋಟಿಸ್ ಪ್ರಕ್ರಿಯೆ ಬಿಸಿಮುಟ್ಟಿದೆ. ನೀವು ನಗರಪಾಲಿಕೆಗೆ ಹಣ ಪಾವತಿಸಿರುವ ಬ್ಯಾಂಕ್ ಚಲನ್ ನಕಲಿಯಾಗಿದ್ದು, ಕೂಡಲೇ ಹಣ ಪಾವತಿಸಬೇಕು. ಇಲ್ಲವಾದಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ನಗರಪಾಲಿಕೆ ಅಧಿಕಾರಿಗಳು ಸಾಕಷ್ಟು ಮಂದಿಗೆ ನೋಟಿಸ್ ನೀಡಿದ್ದಾರೆ.

ಸಮಿತಿಯಲ್ಲಿ ಯಾರಿದ್ದಾರೆ?: ಪ್ರಕರಣದ ತನಿಖೆಗಾಗಿ ಸಮಿತಿ ರಚಿಸಿರುವ ನಗರಪಾಲಿಕೆ ಆಯುಕ್ತರು, ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಅವರನ್ನು ತನಿಖೆಯ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ. ಆಡಿಟರ್ ಜಗದಾನಂದ, ಲೆಕ್ಕಪತ್ರ ವಿಭಾಗದ ಅಧೀಕ್ಷಕ ಪರಶುರಾಮ್, ಪ್ರಥಮ ದರ್ಜೆ ಸಹಾಯಕ ಶಿವಾನಂದ್ ಸಮಿತಿಯಲ್ಲಿದ್ದಾರೆ. ಆದಷ್ಟು ಶೀಘ್ರವಾಗಿ ವರದಿ ನೀಡುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ.

ನಕಲಿ ಚಲನ್ ನೀಡಿ ನಗರಪಾಲಿಕೆಗೆ ವಂಚಿಸಿರುವ ಪ್ರಕರಣ ನನ್ನ ಗಮನಕ್ಕೆ ಬಂದ ಕೂಡಲೇ ತನಿಖೆಗಾಗಿ ಸಮಿತಿಯನ್ನು ರಚನೆ ಮಾಡಲಾಗಿದೆ. ವರದಿ ಬಂದ ನಂತರ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಮಧ್ಯವರ್ತಿಗಳ ಮೂಲಕ ಹಣ ನೀಡಿ ವಂಚನೆಗೊಳಗಾದಲ್ಲಿ ಆಯಾ ಆಸ್ತಿಗಳ ಮಾಲೀಕರೇ ಹೊಣೆಗಾರರಾಗಬೇಕಾಗುತ್ತದೆ. -ಲಕ್ಷ್ಮೀಕಾಂತರೆಡ್ಡಿ, ನಗರಪಾಲಿಕೆ ಆಯುಕ್ತರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ