ಗಿರೀಶ್ ಹುಣಸೂರು
ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆ ಗಳನ್ನು ವ್ಯಾಪಿಸಿರುವ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳು ಹಳೆ ಮೈಸೂರು ಭಾಗವನ್ನು ಸಂಪದ್ಭರಿತಗೊಳಿಸಿವೆ. ಆದರೆ, ಕಾಡಿಗಿಡುವ ಬೆಂಕಿಯಿಂದ ತೇಗ, ಬೀಟೆ, ಹೊನ್ನೆ, ಶ್ರೀಗಂಧ ಸೇರಿದಂತೆ ಕೋಟ್ಯಂತರ ರೂ.ಮೌಲ್ಯದ ಮರ ಮುಟ್ಟುಗಳು ಸುಟ್ಟು ಭಸ್ಮವಾಗು ವುದು ಮಾತ್ರವಲ್ಲ, ಬೆಲೆಯೇ ಕಟ್ಟಲಾಗದ ಸಾವಿರಾರು ಅಪ ರೂಪದ ಪ್ರಭೇದದ ಹಕ್ಕಿ-ಪಕ್ಷಿ, ಸಸ್ತನಿ ಸೇರಿದಂತೆ ಸೂಕ್ಷ್ಮಜೀವಿಗಳು ಸುಟ್ಟುಹೋಗುತ್ತವೆ ಎಂದು ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸುತ್ತಾರೆ.
ಭಾರತದಲ್ಲಿ ಉಂಟಾಗುವ ಕಾಡಿನ ಬೆಂಕಿಗಳು ಸಾಮಾನ್ಯವಾಗಿ ನೆಲಮಟ್ಟದಲ್ಲೇ ವ್ಯಾಪಿಸುತ್ತವೆ. ಆದರೆ, ಸಮಶೀತೋಷ್ಣ ವಲಯದ ಕಾಡುಗಳಲ್ಲಿ ಉಂಟಾಗುವ ಗಗನಚುಂಬಿ ಮರದ ತುದಿ ಹೊತ್ತಿ ಉರಿಯುವ ಮುಕುಟ ಬೆಂಕಿ ನಮ್ಮ ಕಾಡುಗಳಲ್ಲಿ ಕಂಡು ಬರುವುದು ಅಪರೂಪ. ಅರಣ್ಯ ಪ್ರದೇಶದ ಮರಗಳೆಲ್ಲ ಬೇಸಿಗೆ ಆರಂಭದಲ್ಲೇ ತರಗೆಲೆಗಳಂತೆ ಒಣಗಿ ನಿಂತಾಗ, ಗಾಳಿಯ ತೀವ್ರತೆ ಹೆಚ್ಚಿದಂತೆ ಕಾಡ್ಗಿಚ್ಚು ಯಾರ ಅಳತೆಗೂ ನಿಲುಕ ದಂತೆ ವ್ಯಾಪಿಸುತ್ತದೆ. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯಗಳೂ ಇದರಿಂದ ಹೊರತಾಗಿಲ್ಲ. ಇದಕ್ಕೆ ತಾಜ ಉದಾಹರಣೆ ಇತ್ತೀಚಿನ ವರ್ಷಗಳಲ್ಲಿ ಬಂಡೀ ಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವಲಯದಲ್ಲಿ ಕಾಡ್ಗಿಚ್ಚಿನಿಂದ ಈ ಭಾಗದ ಅರಣ್ಯಕ್ಕೆ ಉಂಟಾದ ಗಾಯ ಇನ್ನೂ ಮಾಸಿಲ್ಲ.
ನೆಲಮಟ್ಟದ ಬೆಂಕಿ ಮರ-ಗಿಡಗಳನ್ನೆಲ್ಲ ಭಾಗಶಃ ಸುಟ್ಟು, ಅವು ಮತ್ತೆ ಚಿಗುರದಂತೆ ಮಾಡುವುದಲ್ಲದೆ, ಆ ಭಾಗದ ಕಾಡಿನಲ್ಲಿ ತರಗೆಲೆಗಳೇ ಇಲ್ಲದಂತೆ ಮಾಡಿಬಿಡು ತ್ತದೆ. ನಿಧಾನಗತಿಯಲ್ಲಿ ನೆಲಮಟ್ಟದ ಅರಣ್ಯವನ್ನು ಆಹುತಿ ತೆಗೆದುಕೊಳ್ಳುವ ಬೆಂಕಿಗೆ ಅಪರೂಪದ ಪ್ರಭೇದದ ಹಕ್ಕಿ- ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು, ಕ್ರಿಮಿಕೀಟಗಳು ಸೇರಿದಂತೆ ಅಸಂಖ್ಯಾತ ಸೂಕ್ಷ್ಮಜೀವಿಗಳು ಸುಟ್ಟು ಹೋಗು ವುದಲ್ಲದೆ, ಜತೆಗೆ ಸಸ್ಯಾಹಾರಿ ಪ್ರಾಣಿಗಳ ಮೇವನ್ನೂ ಸುಟ್ಟು ಮೇವಿಗೆ ಯೋಗ್ಯವಲ್ಲದ ಲಂಟಾನ-ಯುಪಟೋ ರಿಯಂ ನಂತಹ ಕಳೆಗಳು ಆವರಿಸಲು ದಾರಿ ಮಾಡಿ ಕೊಡುತ್ತದೆ ಕಾಡಿನ ಈ ಬೆಂಕಿ. ಲಂಟಾನಾ – ಯುಪಟೋ ರಿಯಂನಂತಹ ಕಳೆಗಳು ಕಾಡ್ಗಿಚ್ಚಿನಿಂದ ಉಂಟಾದ ಬೂದಿ ಯನ್ನೇ ಉಪಯೋಗಿಸಿಕೊಂಡು ಚೆನ್ನಾಗಿ ಬೆಳೆಯುವ ಗುಣ ಹೊಂದಿರುವುದರಿಂದ ಬಂಡೀಪುರ ಅರಣ್ಯದ ಬಹು ತೇಕ ಭಾಗಗಳಲ್ಲಿ ದಿಂಡಗ, ಬ್ಯಾಟೆ ಮುಂತಾದ ಸಸ್ಯಗಳೇ ಆಕ್ರಮಿ ಸಿವೆ. ಇದೂ ಕೂಡ ಕಾಡ್ಗಿಚ್ಚು ವ್ಯಾಪಿಸಲು ಕಾರಣವಾಗುತ್ತದೆ.





