ಮೈಸೂರು: ಮೈಸೂರಿನಲ್ಲಿ ಹೆಣ್ಣಾನೆ ಲಕ್ಷ್ಮೀ ಗಂಡು ಮರಿಗೆ ಜನ್ಮ ನೀಡಿದ್ದರೂ ತುಂಬು ಗರ್ಭಿಣಿ ಆನೆಯನ್ನು ದಸರಾಗೆ ಕರೆತಂದು ಅದಕ್ಕೆ ಶಬ್ಧ ತಾಲೀಮು ಮತ್ತು ನಾನಾ ರೀತಿಯ ತರಬೇತಿಗಳನ್ನು ನೀಡುವ ಮೂಲಕ ಮಾನಸಿಕ ಹಿಂಸೆಯನ್ನು ನೀಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳಳ ಜಾಗೃತ ವೇದಿಕೆ ವತಿಯಿಂದ ಅರಮನೆ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಅರಣ್ಯ ಇಲಾಖೆ ತಾನೇ ರೂಪಿಸಿದ ಮಾರ್ಗಸೂಚಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಮಾರ್ಗಸೂಚಿಯ ಪ್ರಕಾರ ಮಸ್ತಿಯಲ್ಲಿರುವ ಗಂಡಾನೆ ಹಾಗೂ ಗರ್ಭಿಣಿಯಾದ ಹೆಣ್ಣಾನೆಯನ್ನು ದಸರಾ ಮಹೋತ್ಸವಕ್ಕೆ ಕರೆತರುವಂತಿಲ್ಲ. ಇದಕ್ಕಾಗಿ ಎರಡು ತಿಂಗಳ ಮುಂಚಿತವಾಗಿಯೇ ಎಲ್ಲಾ ಆನೆಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗುತ್ತದೆ. ಆದರೆ ಅರಣ್ಯ ಇಲಾಖೆ ಲಕ್ಷಿ ಗರ್ಭಿಣಿ ಆನೆಯನ್ನು ಗುರುತಿಸುವಲ್ಲಿ ವಿಫಲವಾಗಿದೆ. ಇದು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಗರ್ಭಿಣಿ ಆನೆಯನ್ನು ಕರೆತಂದು ನಿತ್ಯ 8 ರಿಂದ 10 ಕಿ.ಮೀ. ವರೆಗೆ ನಡೆಸುವುದಲ್ಲದೇ ಈ ಆನೆಯ ಮುಂದೆೆಯೇ ಪಿರಂಗಿ, ಸಿಡಿಮದ್ದನ್ನು ಸಿಡಿಸಿ ಅಮಾನವೀಯವಾಗಿ ನಡೆಸಿಕೊಂಡಿದೆ. ದಸರಾದಂತಹ ಶುಭಕಾರ್ಯಗಳಿಗೆ ಆನೆಗಳನ್ನು ಬಳಸಿಕೊಳ್ಳುವುದು ನಮ್ಮ ಸಂಸ್ಕೃತಿಯಾಗಿದೆ. ಆದರೆ ಈ ಪೂಜ್ಯ ಬಾವನೆಯನ್ನೇ ಮುಂದಿಟ್ಟುಕೊಂಡು ಮಾರ್ಗಸೂಚಿಗಳನ್ನು ಪಾಲಿಸದೆ ಗರ್ಭಿಣಿ ಆನೆಯನ್ನು ಕರೆತಂದು ಪ್ರಮಾದ ಎಸಗಿದೆ ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳ ವೈಫಲ್ಯತೆಗೆ ಮೂಕಪ್ರಾಣಿ ವೇದನೆ ಪಟ್ಟಿದೆ. ಇದಕ್ಕೆ ಹೊಣೆ ಯಾರು. ಇದು ಸರ್ಕಾರದ ವೈಫಲ್ಯತೆಯನ್ನು ಎತ್ತಿ ಹಿಡಿದಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿ ವಿರುದ್ದ ಮುಖ್ಯಮಂತ್ರಿಗಳು ಈ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷರಾದ ಡಿ.ನಾಗಭೂಷಣ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಎನ್.ಆರ್.ನಾಗೇಶ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷರಾದ ರವಿನಂದನ್, ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷರಾದ ಯೋಗೇಶ್ ಉಪ್ಪಾರ್, ಮುಖಂಡರಾದ ಮಹೇಂದ್ರ ಕಾಗಿನೆಲೆ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷರಾದ ಹೆಚ್.ಎಸ್.ಪ್ರಕಾಶ್, ಮುಖಂಡರಾದ ಲೋಕೇಶ್‌ಕುಮಾರ್ ಮಾದಾಪುರ, ಸತ್ಯನಾರಾಯಣ್, ರವಿ ನಜರ್‌ಬಾದ್, ರವಿನಾಯಕ್, ಕನಕಮೂರ್ತಿ, ಮೈಸೂರು ಬಸವಣ್ಣ ಮುಂತಾದವರು ಭಾಗವಹಿಸಿದ್ದರು.
ದಸರೆಗೆ ಆನೆಗಳನ್ನು ತರಲು ಮಾರ್ಗಸೂಚಿಗಳಿವೆ. ಅದನ್ನು ಅರಣ್ಯ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸಿಲ್ಲ. ಪಶುವೈದ್ಯಾಧಿಕಾರಿಗಳು ಸರಿಯಾಗಿ ತಪಾಸಣೆ ಮಾಡಬೇಕಿತ್ತು. ಏನಾದರೂ ಅನಾಹುತವಾಗಿ ಆನೆ ಜೀವ ಹೋಗಿದ್ದರೆ ಯಾರು ಹೊಣೆಯಾಗುತ್ತಿದ್ದರು ಎನ್ನುವುದನ್ನು ಅರಣ್ಯ ಇಲಾಖೆಯೇ ಹೇಳಬೇಕು.
– ಕೆ.ಎಸ್.ಶಿವರಾಮು, ವೇದಿಕೆ ಅಧ್ಯಕ್ಷ
ನೊಟೀಸ್ ಇಲ್ಲ
ಆನೆಗಳನ್ನು ದಸರೆಗೆ ಕರೆ ತರುವಾಗ ಎಲ್ಲ ರೀತಿಯ ತಪಾಸಣೆ ಮಾಡಲಾಗಿದೆ. ಆಗ ಲಕ್ಷ್ಮಿ ಆನೆ ಗರ್ಭಿಣಿ ಎನ್ನುವುದು ಗೊತ್ತಾಗಿಲ್ಲ. ಆನೆ ಸಹಜವಾಗಿಯೇ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಯಾವುದೇ ತೊಂದರೆಯಿಲ್ಲದೇ ಹೆರಿಗೆಯಾಗಿ ತಾಯಿ- ಮರಿ ಆರೈಕೆಯನ್ನು ಇಲಾಖೆ ಮಾಡುತ್ತಿದೆ. ಇದರಲ್ಲಿ ಯಾವುದೇ ಲೋಪ ಕಾಣುವುದಿಲ್ಲ. ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಇಲಾಖೆಯಿಂದ ಯಾವುದೇ ನೋಟಿಸ್ ನೀಡುವುದಿಲ್ಲ. ದಸರೆಗಾಗಿ ಅತ್ಯುತ್ತಮವಾಗಿ ಆನೆಗಳ ನಿರ್ವಹಣೆಯನ್ನು ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮಾಡುತ್ತಿರುವುದರಿಂದ ಆತಂಕ ಬೇಡ.
-ಕುಮಾರ ಪುಷ್ಕರ್, ಎಪಿಸಿಸಿಎಫ್( ವನ್ಯಜೀವಿ)