ಮೈಸೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ ಮಾಡಿರುವ ಪೊಷಕರು ನಾಲ್ವರಿಗೆ ಜೀವದಾನ ಮಾಡಿದ್ದಾರೆ. ಮೈಸೂರಿನ ಹೆಬ್ಬಾಳಿನ ನಿವಾಸಿ, ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಜೆ.ಮನೋಜ್ (26) ಅವರು ಅ.16ರಂದು ಮೈಸೂರಿನ ಜೆ.ಸಿ.ನಗರದ ಬಳಿ ಅಪಘಾತಕ್ಕೀಡಾಗಿದ್ದರು.
ಅ.17ರಂದು ಇವರನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದರಿಂದ ಎರಡು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿರಿಸಲಾಗಿತ್ತು. ಅ.20ರ ಬೆಳಗ್ಗೆ ಮಾನವ ಅಂಗಾಂಗ ಕಸಿ ಕಾಯ್ದೆಯ ಪ್ರಕಾರ, ಆಸ್ಪತ್ರೆಯ ವೈದ್ಯರು ಬ್ರೈನ್ ಡೆಡ್ ಎಂದು ಘೋಷಿಸಿದ್ದರು. ನಂತರ ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತಪಡಿಸಲಾಗಿತ್ತು. ಮನೋಜ್ ಪೋಷಕರಾದ ಜಯಶಂಕರ್ ಮತ್ತು ಜಯಲಕ್ಷ್ಮಿ ಅವರಿಗೆ ಅಂಗಾಂಗ ದಾನದ ಬಗ್ಗೆ ಸಲಹೆ ನೀಡಿದಾಗ, ಪೋಷಕರು ಒಪ್ಪಿಗೆ ಸೂಚಿಸಿದ್ದರು.ಮನೋಜ್ ಅಂಗಗಳನ್ನು (ಹೃದಯ ಕವಾಟಗಳು, ಒಂದು ಮೂತ್ರಪಿಂಡ, ಯಕೃತ್ತು ಕಾರ್ನಿಯಾಗಳನ್ನು) ಕಸಿ ಮಾಡಲಾಗಿದೆ. ಹೃದಯ ಕವಾಟಗಳನ್ನು ಬೆಂಗಳೂರಿನ ಶ್ರೀ ಜಯದೇವ ಆಸ್ಪತ್ರೆ, ಲಿವರ್ ಹಾಗೂ ಬಲ ಕಿಡ್ನಿಯನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ, ಕಾರ್ನಿಯಾಗಳನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.