ಮೈಸೂರು: ಮೈಸೂರು ಸೀಮೆಯ ಅನುಪಮ ಜಾನಪದ ಹಾಡುಗಾರ್ತಿ ಮಾರಗೌಡನಹಳ್ಳಿ ಭಾಗ್ಯಮ್ಮ ಸೋಮೇಗೌಡ (೬೫) ಅವರು ಮಂಗಳವಾರ ರಾತ್ರಿ ನಿಧನರಾದರು.
ಮೃತರು ಪತಿ ಸೋಮೇಗೌಡ, ಒಬ್ಬ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಬುಧವಾರ ಭಾಗ್ಯಮ್ಮ ಪಾರ್ಥೀವ ಶರೀರದ ಅಂತ್ಯಕ್ರಿಯೆ ಅವರ ಜಮೀನಿನಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರು ಆಕಾಶವಾಣಿಯ ಉನ್ನತ ಶ್ರೇಣಿಯ ಜಾನಪದ ಕಲಾವಿದೆಯಾಗಿದ್ದ ಅವರು ಹಲವು ಸನ್ಮಾನ ಹಾಗೂ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ತಮ್ಮ ತಂಡದೊಡನೆ ತತ್ವಪದ, ಸೋಬಾನೆ ಪದ, ರಾಗಿ ಬೀಸೋ ಹಾಡು, ಹಸೆ ಹಾಡುಗಳನ್ನು ಹೇಳುತ್ತಾ ಸುತ್ತಲಿನ ಹತ್ತು ಸೀಮೆಗಳಲ್ಲೂ ಖ್ಯಾತರಾಗಿದ್ದ ಭಾಗ್ಯಮ್ಮನವರು ಸುತ್ತೂರು ಜಾತ್ರೆಯಲ್ಲಿ ಹಾಡಲು ತಮ್ಮ ತಂಡವನ್ನು ಸಿದ್ಧಗೊಳಿಸುತ್ತಿರುವಾಗಲೇ ಹಠಾತ್ ಅಸ್ವಸ್ಥಗೊಂಡು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮೃತಪಟ್ಟರು.
ಮಾರಗೌಡನಹಳ್ಳಿಯ ಒಕ್ಕಲುಗೇರಿಯ ನಿವಾಸಿಯಾಗಿದ್ದ ಭಾಗ್ಯಮ್ಮನವರು ಅದೇ ಊರಿನ ದಲಿತರ ಕೇರಿಯ ದೇವಮ್ಮನವರ ಜೊತೆ ಕಳೆದ 50 ವರ್ಷಗಳಿಂದ ಹಾಡುತ್ತಿದ್ದರು. ಜಾತಿ ಅಂತಸ್ತುಗಳನ್ನ ಮೀರಿದ ಇವರಿಬ್ಬರ ಸ್ನೇಹದ ಕಥೆ ಈ ಹಿಂದೆ ಆಂದೋಲನ ಹಾಡು ಪಾಡುವಿನಲ್ಲಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.





