ಸಾಲಿಗ್ರಾಮ: ಆಕಸ್ಮಿಕವಾಗಿ ಬೆಂಕಿ ತಗುಲಿ ಕಬ್ಬಿನ ಬೆಳೆ ನಾಶವಾಗಿರುವ ಘಟನೆ ತಾಲ್ಲೂಕಿನ ಮಿರ್ಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದಿ.ಎಂ.ಕೆ.ಕೋಟೆಗೌಡರ ಪುತ್ರ ಎಂ.ಕೆ.ಮೃತ್ಯುಂಜಯ ಎಂಬವರಿಗೆ ಸೇರಿದ ಸರ್ವೆ ನಂಬರ್ ೨೬೩ರಲ್ಲಿ ೩ ಎಕರೆ ೩೦ ಗುಂಟೆಯಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಬ್ಬಿನ ಬೆಳೆಯು ಸಂಪೂರ್ಣವಾಗಿ ನಾಶವಾಗಿದೆ. ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ ಸುದ್ದಿ ತಿಳಿದ ತಕ್ಷಣ ಕೆ.ಆರ್.ನಗರದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿ ಮುಂದೆ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ಈ ಘಟನೆಯಿಂದ ಎಂ.ಕೆ.ಮೃತ್ಯುಂಜಯ ಅವರಿಗೆ ಅಪಾರ ನಷ್ಟ ಉಂಟಾಗಿದೆ. ಇವರ ನೆರವಿಗೆ ಸರ್ಕಾರ ಧಾವಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





