Mysore
26
scattered clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್) ಸದಸ್ಯರ ಪ್ರತಿಭಟನೆ
ಮೈಸೂರು: ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ(ಎಐಎಂಎಸ್‌ಎಸ್) ಮೈಸೂರಿನ ಚಿಕ್ಕಗಡಿಯಾರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಚಿಕ್ಕಗಡಿಯಾರ ಎದುರು ಜಮಾಯಿಸಿದ ಪ್ರತಿಭಟನಾಕಾರರು ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವರದಕ್ಷಿಣೆಗಾಗಿ ಕೊಲೆ, ಮರ್ಯಾದೆ ಹತ್ಯೆಗಳು, ಆ್ಯಸಿಡ್ ದಾಳಿ, ಸಾಮೂಹಿತ ಅತ್ಯಾಚಾರ… ಹೀಗೆ ಭ್ರೂಣಾವಸ್ಥೆಯಿಂದ ಹಿಡಿದು ಮಸಣ ಸೇರುವವರೆಗೂ ಹಲವು ಬಗೆಯ ಅನಾದಾರ, ಅಗೌರವ ಕ್ರೌರ್ಯಗಳಿಗೆ ಮಹಿಳೆ ತುತ್ತಾಗುತ್ತಿದ್ದಾಳೆ. ಹಸುಗೂಸಿನಿಂದ ಹಿಡಿದು ಎಲ್ಲಾ ವಯೋಮಾನದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
೨೦೨೨ರ ವರದಿಯ ಪ್ರಕಾರ ರಾಜ್ಯದಲ್ಲಿ ಲಿಂಗಾನುಪಾತ ಕುಸಿಯುತ್ತಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಪ್ರಕಾರ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಮಹಿಳೆಯರ ಮೇಲೆ ಮೃಗೀಯ ದಾಳಿಗಳು ಮುಂದುವರಿಯಲು ಪುರುಷ ಪ್ರಧಾನ ಧೋರಣೆ ಕಾರಣ. ಅಶ್ಲೀಲತೆ, ಕ್ರೌರ್ಯದ ಪ್ರಸಾರ ಮತ್ತು ಮದ್ಯ, ಮಾದಕ ವಸ್ತುಗಳ ಹಾವಳಿಗಳಿಂದ ವಿಕೃತ ಲೈಂಗಿಕತೆಗಳೂ ಬೆಳೆಯುತ್ತಿದ್ದು, ಪಾತಕಿ ಆಯಾಮವನ್ನೂ ತಳೆಯುತ್ತಿವೆ ಎಂದು ಅವರು ಆರೋಪಿಸಿದರು.
ಮಹಿಳೆ ಪುರುಷನ ತೃಷೆಯನ್ನು ತೀರಿಸುವ ವಸ್ತು ಎಂದು ಕಾಣುವ ಪ್ರವೃತ್ತಿ ಎಲ್ಲಿಯವರೆಗೆ ಸಮಾಜದಲ್ಲಿ ನೆಲೆಸಿರುತ್ತದೆಯೋ, ನ್ಯಾಯಾಂಗ ಮತ್ತು ಆಡಳಿತಾಂಗ ಎಲ್ಲಿಯವರೆಗೆ ನ್ಯಾಯಪ್ರಜ್ಞೆ, ಸೂಕ್ಷ್ಮ ಸಂವೇದನೆ ಕಳೆದುಕೊಂಡಿರುತ್ತದೆಯೋ ಅಲ್ಲಿಯವರೆಗೆ ಮಹಿಳೆಯರ ಮೇಲಿನ ಪಾತಕಗಳು ಸಮಾಜದಲ್ಲಿ ಹೆಚ್ಚುತ್ತಲೇ ಹೋಗುತ್ತದೆ. ಇಂತಹ ಅಮಾನವೀಯ ಘಟನೆಗಳಿಗೆ ಕೊನೆ ಹಾಕಲು ನಾವೆಲ್ಲ ಸಜ್ಜಾಗಬೇಕಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನವನ್ನು ಎಐಎಂಎಸ್‌ಎಸ್ ರಾಜ್ಯ ಸೆಕ್ರೆಟರಿಯೇಟ್ ಸದಸ್ಯೆ ಶಾಂತ ಉದ್ಘಾಟಿಸಿದರು. ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಜಿ.ಎಸ್. ಸೀವಾ, ಮುಖಂಡರಾದ ನಳಿನ, ಅಭಿಲಾಷ, ಪುಟ್ಟರಾಜು, ಬಸವರಾಜು ಮೊದಲಾದವರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!