ಗುಂಡ್ಲುಪೇಟೆ: ಅರಿಶಿಣಕ್ಕೆ ಮಾರುಕಟ್ಟೆ ಬೆಲೆ ಅಸ್ಥಿರವಾಗಿರುವುದರಿಂದ ಸರ್ಕಾರ ಮಧ್ಯ ಪ್ರವೇಶಿಸಿ ಅರಿಶಿಣವನ್ನು ಎಂಐಎಸ್-ಪಿಎಸ್‌ಎಸ್ ಯೋಜನೆ ಅಡಿಯಲ್ಲಿ ಬೆಂಬಲ ಬೆಲೆಯಲ್ಲಿ ಕೊಂಡು ಅರಿಶಿನ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಲುವಾಗಿ ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ ಬಂದಿದ್ದ ಸುಮಾರು 300ಕ್ಕೂ ಹೆಚ್ಚು ಜನ ರೈತರು ಕೆಲವು ನಿರ್ಣಯಳನ್ನು ಕೈಗೊಂಡರು.
ಜಿಲ್ಲಾಧಿಕಾರಿಗಳ ಕಚೇರಿಗೆ ಬೆಳಗಾರರ ಸಮಸ್ಯೆಗಳನ್ನು ಹೊತ್ತು ಮೆರವಣಿಗೆ ಮೂಲಕ ಹೋಗಿ ಮನವಿ ಸಲ್ಲಿಸುವುದು, ಕೃಷಿ ಸಚಿವರ ಬಳಿಗೆ ನಿಯೋಗ ತೆರಳುವುದು. ಪ್ರಧಾನ ಮಂತ್ರಿಗಳನ್ನು ಗಮನ ಸೆಳೆಯಲು ಪತ್ರ ಚಳವಳಿ ಮಾಡುವುದು. ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆರವರ ಬಳಿಗೆ ನಿಯೋಗ ತೆರಳಲು ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ನಾಗಾರ್ಜುನ್ ಕುಮಾರ್, ಚೌಡಹಳ್ಳಿ ಪ್ರಗತಿಪರ ಕೃಷಿಕರು ರಾಜೇಂದ್ರ ಮಾತನಾಡಿದರು. ಅರಿಶಿನ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳಾದ ನಾಗಾರ್ಜುನ ಕುವಾರ್, ಚಿದಾನಂದ ವೀರನಪುರ, ಶಶಿಕುವಾರ್ ದೊಡ್ಡಪ್ಪೂರು, ರಾಜೇಂದ್ರ, ಹುತ್ತೂರು ಸತೀಶ, ತೆರಕಣಾಂಬಿ ಚಂದ್ರು, ಚೌಡಳ್ಳಿ ಸದಾಶಿವ ಮೂರ್ತಿ, ವೀರನಪುರ ನಾಗರಾಜು, ಬೆಳವಾಡಿ ಪ್ರದೀಪ್, ಶಶಿಕುವಾರ್ ರೈತ ಸಂಘದ ಸಂಪತ್ ಕುಂದುಕೆರೆ ಹಾಗೂ ಇತರರು ಹಾಜರಿದ್ದರು.





