Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪರೀಕ್ಷೆ ಬಂದರೂ ಕನ್ನಡ ಪಠ್ಯಪುಸ್ತಕ ಬರಲಿಲ್ಲ !

ಮೈವಿವಿ ವಿಳಂಬ ನೀತಿಗೆ ಕನ್ನಡ ಅಧ್ಯಾಪಕರು, ವಿದ್ಯಾರ್ಥಿಗಳ ಸಂಕಟ

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ಪದವಿ ಪರೀಕ್ಷೆಗಳಿಗೆ ಸುಮಾರು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದರೂ ಇನ್ನೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯ ಪುಸ್ತಕ ಸರಬರಾಜು ಆಗಿಯೇ ಇಲ್ಲ.

ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ೨೦೦ಕ್ಕೂ ಹೆಚ್ಚು ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಮೊದಲನೇ ವರ್ಷದ ಸೆಮಿಸ್ಟರ್ ಪರೀಕ್ಷೆಗಳಿಗೆ ಸಿದ್ಧವಾಗುತ್ತಿದ್ದಾರೆ. ಆದರೆ, ವಿಶ್ವವಿದ್ಯಾನಿಲಯ ಮಾತ್ರ ಕನ್ನಡ ಭಾಷೆ ಮತ್ತು ಐಚ್ಛಿಕ ಕನ್ನಡ ಪಠ್ಯ ಪುಸ್ತಕಗಳನ್ನು ನೀಡದಿರುವುದು ವಿದ್ಯಾರ್ಥಿಗಳ ಓದುವ ಉತ್ಸಾಹವನ್ನೇ ಕುಗ್ಗಿಸಿದೆ.

ಉತ್ತಮ ದರ್ಜೆುಂಲ್ಲಿ ಉತ್ತೀರ್ಣರಾಗಲು ಭಾಷಾ ವಿಷುಂಗಳಲ್ಲಿ ಹೆಚ್ಚಿನ ಅಂಕ ಗಳಿಸುವುದು ಅಗತ್ಯವಾಗಿರುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತಿರುವ ವಿಚಾರಗಳೆಲ್ಲವೂ ವಿವಿಗೆ ಗೌಣವಾಗಿ ಕಾಣುತ್ತಿವೆ. ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ತರಾತುರಿಯಲ್ಲಿ ಜಾರಿ ಮಾಡಿರುವುದೇ ಕಾರಣ ಎಂಬ ಅಪಾದನೆಗಳು ಕೇಳಿ ಬಂದಿವೆ.

ಅಧ್ಯಾಪಕರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಚರ್ಚೆ: ಪಠ್ಯ ಪುಸ್ತಕ ನೀಡದಿರುವ ಕಾರಣ ಸೂಕ್ತ ಸಮಯಕ್ಕೆ ಸಿಲಬಸ್ ಮುಗಿಸುವುದು ಅಸಾಧ್ಯ. ಜೊತೆಗೆ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಲ್ಲದೆ ಪರೀಕ್ಷೆಗೆ ತಯಾರಾಗುವುದೂ ಕಷ್ಟವಾಗಿದೆ. ಹೀಗಾಗಿ ಪಠ್ಯ ಪುಸ್ತಕಗಳನ್ನು ನೀಡುವಂತೆ ಅಧ್ಯಾಪಕರು ಮೇಲಧಿಕಾರಿಗಳಿಗೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಮನವಿ ಮಾಡುತ್ತಿದ್ದಾರೆ.

ಪ್ರಸಾರಾಂಗ ಇದ್ದರೂ ಪಠ್ಯ ಪುಸ್ತಕ ಮುದ್ರಿಸಿಕೊಡಲು ವಿಳಂಬವೇಕೆ? ಎಂದು ತಿಳಿಯುತ್ತಿಲ್ಲ. ಪ್ರಶ್ನಿಸಿದರೆ ಹಾರಿಕೆಯ ಉತ್ತರಗಳು ಬರುತ್ತವೆ. ಸಕಾಲಕ್ಕೆ ಪಠ್ಯ ಪುಸ್ತಕ ಸಿಗದಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವಿಶ್ವವಿದ್ಯಾನಿಲಯದವರು ಗಂಭೀರವಾಗಿ ಪರಿಗಣಿಸಬೇಕು ಎಂದು ಅಧ್ಯಾಪಕರೊಬ್ಬರು ಮನವಿ ಮಾಡಿದ್ದಾರೆ.

ಬಿಎಸ್‌ಸಿ ವಿದ್ಯಾರ್ಥಿಗಳಿಗಷ್ಟೆ ಪಿಡಿಎಫ್ ರೂಪದಲ್ಲಿ ಪಠ್ಯವನ್ನು ಒದಗಿಸಿರುವುದರಿಂದ, ಉಳಿದ ಕೋರ್ಸ್‌ಗಳವರು ಜನಪ್ರಿಯ ಕವಿಗಳ ಪದ್ಯಗಳಿಗಾಗಿ ಅಂತರ್ಜಾಲದ ಮೊರೆ ಹೋಗಿದ್ದಾರೆ. ಆದರೆ, ಪ್ರಸಾರಾಂಗದವರು ಹೇಳಿದಂತೆ ಪೂರ್ಣ ಪ್ರಮಾಣದಲ್ಲಿ ಪಠ್ಯಗಳು ಬಂದಿಲ್ಲ. ಪುಸ್ತಕ ನೀಡಲು ಕನಿಷ್ಠ ಇಪ್ಪತ್ತು ದಿನಗಳು ಬೇಕು ಎಂದಿದ್ದಾರೆ.

ಯಾರಾದರೂ ಬಿಕಾಂ, ಬಿಸಿಎ, ಬಿಎಎ ಒಂದು ಘಟಕಕ್ಕಾದರೂ ಪಿಡಿಎಫ್ ಕಳುಹಿಸಿಕೊಡುವಂತೆ ಇನ್ನೊಬ್ಬ ಅಧ್ಯಾಪಕರು ಪರಿಪರಿಯಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೊಬ್ಬರು ಹಿಂದಿನ ಸೆಮಿಸ್ಟರ್‌ನಲ್ಲೂ ಕೊನೆ ಕ್ಷಣದಲ್ಲಿ ಪಠ್ಯ ಪುಸ್ತಕ ಪೂರೈಸಲಾಗಿತ್ತು. ಈ ಬಾರಿಯಾದರೂ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳು ದೊರೆಯುವ ಆಶಾಭಾವನೆ ಇದೆ. ಆದರೆ, ಅವು ಉತ್ತಮವಾಗಿ ಮುದ್ರಣಗೊಂಡಿರುತ್ತವೆಯೇ? ಎಂಬ ಸಂದೇಹ ಅಧ್ಯಾಪಕರನ್ನು ಕಾಡುತ್ತಿದೆ.

ಮುದ್ರಣ ಗುಣಮಟ್ಟ ಹೇಗಿದೆ?
ಕಳೆದೆರಡು ವರ್ಷಗಳಿಂದ ಪ್ರಸಾರಾಂಗದಿಂದ ಹೊರ ಬಂದಿರುವ ಕನ್ನಡ ಪಠ್ಯ ಪುಸ್ತಕಗಳ ಮುದ್ರಣದ ಗುಣಮಟ್ಟ ಶೋಚನೀಯವಾಗಿದೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಿದರೆ ಉತ್ತಮ. ಇಲ್ಲವಾದರೆ ಪುಸ್ತಕದೊಂದಿಗೆ ಕನ್ನಡಕವನ್ನೂ ಕೊಳ್ಳಬೇಕಾದೀತು ಎಂದು ವ್ಯಂಗ್ಯವಾಡಿದ್ದಾರೆ.

ಪಾಠ ಮಾಡೋದು ಹೇಗೆ?
ಆನ್‌ಲೈನ್‌ನಲ್ಲಿ ಕೆಲವು ಲೇಖನಗಳು ಸಿಗುವುದಿಲ್ಲ. ಪಠ್ಯದ ಬದಲಿಗೆ ಮೊಬೈಲ್ ಫೋನ್ ಇಟ್ಟುಕೊಂಡು ಪಾಠ ಮಾಡಬೇಕಾಗಿದೆ. ಪಠ್ಯಕ್ರಮವಿಲ್ಲದೆ ಗೈಡ್ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಪ್ರಸಾರಾಂಗ ಇದ್ದರೂ ಪಠ್ಯ ಪುಸ್ತಕ ಮುದ್ರಿಸಿಕೊಡಲು ವಿಳಂಬವೇಕೆ ಎಂದು ತಿಳಿಯುತ್ತಿಲ್ಲ.
ಹೆಸರು ಹೇಳಲು ಇಚ್ಛಿಸದ ಕನ್ನಡ ಅಧ್ಯಾಪಕ.

——–

೧೫ ದಿನದಲ್ಲಿ ವಿತರಣೆ

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಗೊಳಿಸಿರುವ ಹಿನ್ನೆಲೆಯಲ್ಲಿ ಪಠ್ಯ ಪುಸ್ತಕ ನೀಡುವುದು ತಡವಾಗಿದೆ. ಈಗಾಗಲೇ ಸಾಫ್ಟ್ ಕಾಪಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇನ್ನು ೧೫ ದಿನಗಳೊಳಗೆ ಪಠ್ಯ ಪುಸ್ತಕಗಳು ಸಂಪೂರ್ಣ ವಿತರಣೆಯಾಗಲಿವೆ.

– ಪ್ರೊ.ಜಿ.ಹೇಮಂತ್ ಕುಮಾರ್, ಕುಲಪತಿ, ಮೈಸೂರು ವಿವಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ