Mysore
16
broken clouds

Social Media

ಬುಧವಾರ, 04 ಫೆಬ್ರವರಿ 2026
Light
Dark

ಇಂಜಿನಿಯರ್‌ ಸಾವು ಇನ್ನೂ ನಿಗೂಢ: ಶ್ರೀರಂಗಪಟ್ಟಣದಲ್ಲಿ ಅಂತ್ಯಕ್ರಿಯೆ

ಮೈಸೂರು: ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆಯ ಇಂಜಿನಿಯರ್ ಡಿ.ಕೆ.ದಿನೇಶ್ ಕುಮಾರ್ (೫೦) ಅವರ ಅಂತ್ಯಕ್ರಿಯೆ ದೊಡ್ಡಪಾಳ್ಯದಲ್ಲಿ ಮಂಗಳವಾರ ನೆರವೇರಿತು.

ಬೋಗಾದಿ ೨ನೇ ಹಂತದ ನಿರ್ಮಿತಿ ಕೇಂದ್ರ ಬಳಿ ವಾಸವಿದ್ದ ಡಿ.ಕೆ.ದಿನೇಶ್ ಕುಮಾರ್ ಅವರು ಮೃತಪಟ್ಟು ಸುಮಾರು ೪೦ ಗಂಟೆಗಳಾಗಿದ್ದು, ಮೃತದೇಹ ಕೊಳೆಯಲು ಆರಂಭಿಸಿತ್ತು. ಸೋಮವಾರ ರಾತ್ರಿ ಸರಸ್ವತಿಪುರಂ ಠಾಣೆಯಲ್ಲಿ ಎಫ್‌ಐಆರ್ ಆದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಬಳಿಕ ಶ್ರೀರಂಗಪಟ್ಟಣ ತಾಲೂಕು, ದೊಡ್ಡಪಾಳ್ಯದಲ್ಲಿ ಅಂತ್ಯಕ್ರಿಯೆ ನೆರವೇರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರಿನ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದಲ್ಲಿ ಯೋಜನಾ ನಿರ್ದೇಶಕರಾಗಿ ದಿನೇಶ್ ಕುಮಾರ್ ಸೇವೆ ಸಲ್ಲಿಸಿದ್ದರು. ಇವರು ಮೃತಪಟ್ಟಿರುವುದನ್ನು ನೋಡಿ ಅರೆಪ್ರಜ್ಞಾವಸ್ಥೆಗೆ ಹೋಗಿದ್ದ ಪತ್ನಿ ಮತ್ತು ೧೨ ವರ್ಷದ ಮಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದಾರೆ. ‘ನ.೨೭ರಂದು ರಾತ್ರಿ ಜೊತೆಯಲ್ಲೇ ಊಟ ಮಾಡಿ ಮಲಗಿದ್ದೆವು. ಇಂದು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ದಿನೇಶ್ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದನ್ನು ನೋಡಿ ನಾವೂ ಮೂರ್ಛೆ ಹೋದೆವು’ ಪತ್ನಿ ಮತ್ತು ಪುತ್ರ ಹೇಳಿಕೆ ನೀಡಿದ್ದಾರೆ.ಮರಣೋತ್ತರ ಪರೀಕ್ಷೆ ಬಂದ ನಂತರ ಏನಾಗಿದೆ ಎಂಬುದು ತಿಳಿಯಲಿದೆ ಎಂದು ಸರಸ್ವತಿಪುರಂ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಎಂ. ರವೀಂದ್ರ ತಿಳಿಸಿದ್ದಾರೆ.

ಪ್ರಜ್ಞೆ ತಪ್ಪಿದ್ದಾರೆ ಎನ್ನಲಾದ ದಿನೇಶ್ ಕುಮಾರ್ ಅವರನ್ನು ಮನೆಯ ಕೆಲಸಗಾರರು ಕಾಮಾಕ್ಷಿ ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು, ಮೃತಪಟ್ಟಿರುವುದಾಗಿ ದೃಢಪಡಿಸಿದರು ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಅಸ್ವಸ್ಥರಾಗಿ ಪ್ರಜ್ಞಾಹೀನರಾದ ಪತ್ನಿ ಆಶಾ ಮತ್ತು ಪುತ್ರನನ್ನೂ ಅದೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಸುಯೋಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇಂದು ಮಧ್ಯಾಹ್ನ ಆಸ್ಪತ್ರೆಗೆ ತೆರಳಿದ ಸರಸ್ವತಿಪುರಂ ಠಾಣೆ ಪೊಲೀಸರು, ದಿನೇಶ್‌ಕುಮಾರ್ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.

ಆದರೆ, ಡಿ.ಕೆ. ದಿನೇಶ್ಕುಮಾರ್ ಅವರ ಮೃತದೇಹ ಊದಿಕೊಂಡಿದ್ದು, ಬಾಯಲ್ಲಿ ರಕ್ತಸ್ರಾವವಾಗಿದೆ. ದೇಹದ ಕೆಲ ಭಾಗ ಗಾಯವಾಗಿದೆ. ಹಾಗಾಗಿ, ಈ ಸಾವಿನಲ್ಲಿ ಅನುಮಾನವಿದ್ದು, ಮನೆಯಲ್ಲಿ ಜೊತೆಯಲ್ಲಿಯೇ ಇದ್ದ ಪತ್ನಿ, ಪುತ್ರ, ಕೆಲಸಗಾರರನ್ನು ವಿಚಾರಣೆ ಮಾಡಿ, ನ್ಯಾಯ ಒದಗಿಸುವಂತೆ ಮೃತ ವ್ಯಕ್ತಿಯ ಸೋದರ ಮಾವ ಹೆಚ್.ಎಂ. ನಾರಾಯಣ ಎಂಬುವರು ಸರಸ್ವತಿಪುರಂ ಠಾಣೆಗೆ ದೂರು ನೀಡಿದ್ದು, ಭಾರತೀಯ ದಂಡಸಂಹಿತೆ ೧೭೪ಸಿ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!