Mysore
25
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಶಿಕ್ಷಣದ ಜೊತೆಗೆ ಕ್ರೀಡೆಗೆ ಒತ್ತು ನೀಡಿರುವುದು ಶ್ಲಾಘನೀಯ : ಶಾಸಕ ಆರ್ ನರೇಂದ್ರ

ಹನೂರು: ನೂತನ ಶಿಕ್ಷಣ ಸಂಸ್ಥೆ ಮುನ್ನಡೆಸುವುದರ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತಿರುವ ಜೀವರಾಜ್ ಎಜುಕೇಶನಲ್ ಟ್ರಸ್ಟ್ ಅವರ ಕಾರ್ಯವೈಖರಿ ಶ್ಲಾಘನೀಯವಾದದ್ದು ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಹನೂರು ಸಮೀಪದ ಹುಲುಸುಗುಡ್ಡೆ ಬಳಿ ಇರುವ ರಿಪಬ್ಲಿಕ್ ಅಂತರಾಷ್ಟ್ರೀಯ ವಸತಿ ಶಾಲೆ ಮತ್ತು ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜೀವರಾಜ್ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಲಬ್ ನ ಉದ್ಘಾಟನಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನಮ್ಮ ಗ್ರಾಮೀಣ ಭಾಗದಲ್ಲೂ ಪ್ರತಿಭಾನ್ವಿತರು ಇದ್ದಾರೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಉತ್ತಮ ಪ್ರತಿಭೆಗಳಿವೆ. ಆಗಾಗಿ ಇಂತಹ ಉತ್ತಮ ವೇದಿಕೆಗಳು ಸಹಕಾರಿಯಾಗಲಿವೆ. ನಮ್ಮ ಕುಟುಂಬದ ಸದಸ್ಯರಂತೆ ಒಬ್ಬರಾಗಿದ್ದರು ಜೀವರಾಜ್ ಅವರು ಸಾಮಾಜಿಕ ಸೇವೆ ಮತ್ತು ನ್ಯಾಯಕ್ಕಾಗಿ ಶ್ರಮಿಸಿದವರು. ಅವರ ಸುಪುತ್ರ ರವೀಂದ್ರ ಕೂಡ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅವರ ಶಿಕ್ಷಣ ಸಂಸ್ಥೆಗೆ ನಾನು ಕೂಡ ಸಹಕಾರವನ್ನು ಒದಗಿಸುತ್ತೇನೆ ಎಂದು ತಿಳಿಸಿದರು.

ಪೊಲೀಸ್ ವರಿಷ್ಟಾಧಿಕಾರಿ ಸಿ.ಗೋಪಾಲ್ ಮಾತನಾಡಿ, ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಆಟದಲ್ಲಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು. ಈ ಹಿಂದೆ ಮಾರ್ಟಹಳ್ಳಿಯಿಂದ ಕೊಳ್ಳೇಗಾಲ ತಾಲ್ಲೂಕು ಕೇಂದ್ರಕ್ಕೆ ಹೋಗಿ ಆಡಬೇಕಾದ ಸ್ಥಿತಿ ಇತ್ತು. ಆದರೆ ಈ ಭಾಗದಲ್ಲೇ ಇಂತಹ ವೇದಿಕೆಗಳು ಸಿಗುತ್ತಿರುವುದು ಕ್ರೀಡಾಪಟುಗಳಿಗೆ ಅನುಕೂಲಕರವಾಗಿದೆ. ಅಂದು ಬೆರಳೆಣಿಕೆಯಷ್ಟೇ ತಂಡಗಳಿದ್ದವು. ಇಂದು ಪ್ರತಿ ಗ್ರಾಮಗಳಲ್ಲೂ ಒಳ್ಳೆಯ ತಂಡಗಳಿವೆ. ಕ್ರೀಡಾಕೂಟಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿವೆ ಜೀವರಾಜ್ ಶಿಕ್ಷಣ ಸಂಸ್ಥೆ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಡಾ. ಮಹೇಶ್ ಮಾತನಾಡಿ, ಈ ಹಿಂದೆ ಪ್ರತಿಭೆ ಇದ್ದರೂ ಸೂಕ್ತವಾದ ವೇದಿಕೆ ಇಲ್ಲದೆ ಇರುವುದರಿಂದ ಎಷ್ಟೋ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಸಾಧ್ಯವಾಗಿರಲಿಲ್ಲ. ವಾಲಿಬಾಲ್ ಕ್ರೀಡಾಕೂಟ ಒಗ್ಗಟ್ಟಿನ ಸಂಕೇತವಾಗಿದ್ದು ಆಟವನ್ನು ಗೆಲುವುಗೋಸ್ಕರ ಆಡದೆ ಕ್ರೀಡಾಸ್ಪೂರ್ತಿಯಿಂದ ಆಡಬೇಕು, ಯಾವುದೇ ವೈಮನಸ್ಸುಗಳನ್ನು ಬೆಳೆಸಿಕೊಳ್ಳಬಾರದು. ಜೀವರಾಜ್ ಎಜುಕೇಶನಲ್ ಟ್ರಸ್ಟ್ ನ ರವೀಂದ್ರ ಅವರು ಸಿಂಗಾಪುರದಂತ ದೇಶದಲ್ಲಿ ಇದ್ದವರು. ಅಲ್ಲಿ ಕಾಯಕ ಮಾಡಿ ಕೈ ತುಂಬಾ ಹಣವನ್ನು ಸಂಪಾದಿಸಬಹುದಿತ್ತು ಆದರೆ ಅವರು ತಮ್ಮ ಗ್ರಾಮದಲ್ಲೇ ಏನಾದರೂ ಸಾಧನೆ ಮಾಡಬೇಕೆಂದು ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಉತ್ತಮ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ತಾ.ಪಂ. ಮಾಜಿ ಸದಸ್ಯ ಜಾವಾದ್ ಅಹಮದ್, ಮುರುಡೇಶ್ವರ ಸ್ವಾಮಿ, ಜಿಲ್ಲಾ ಎಸ್ಸಿ ಎಸ್ಟಿ ಘಟಕದ ನಾಗರಾಜು, ಜೀವರಾಜ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ರವೀಂದ್ರ, ಜೆ.ಪುಟ್ಟರಾಜು, ಪ್ರಭು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ