ಪಿರಿಯಾಪಟ್ಟಣದಲ್ಲಿ ದೇವರಾಜ ಅರಸು ಕಲಾ ಭವನ ಉದ್ಘಾಟನೆ
ಪಿರಿಯಾಪಟ್ಟಣ: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪಿರಿಯಾಪಟ್ಟಣ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಡಿ.ದೇವರಾಜ ಅರಸು ಕಲಾ ಭವನವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇವರಾಜ ಅರಸು ಅಭಿಮಾನಿ, ಶಿಷ್ಯನಾಗಿ ಅವರ ಹೆಸರಿನಲ್ಲಿ ನಿರ್ಮಿಸಿರುವ ಕಟ್ಟಡ ಉದ್ಘಾಟನೆ ಮಾಡುವ ಭಾಗ್ಯ ಸಿಕ್ಕಿದೆ ಎಂದರು.
ರಾಜ್ಯದ ಜನತೆ ದೇವರಾಜ ಅರಸು ಅವರನ್ನು ನೆನೆಸಿಕೊಳ್ಳಬೇಕು. ಎಂಟು ವರ್ಷ ಆಡಳಿತ ನಡೆಸಿ ಎಲ್ಲಾ ಸಮುದಾಯದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಅರಸು ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕಾರ್ಯಕ್ರಮ ನೀಡಿದವರು. ಪಿರಿಯಾಪಟ್ಟಣದಲ್ಲಿ ಅವರ ಹೆಸರಿನಲ್ಲಿ ಕಟ್ಟಡ ನಿರ್ಮಾಣ ಮಾಡಿ ಜನತೆಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಸರ್ಕಾರದ ಹಂತದಲ್ಲಿ ಕೆಲಸ ಮಾಡಿಸಿಕೊಳ್ಳುವ ಸಾಮರ್ಥ್ಯ ಮಹದೇವ್ ಅವರಿಗಿದೆ. ಕೆರೆ ತುಂಬಿಸುವ, ಮನೆಮನೆಗೆ ನಳ ಸಂಪರ್ಕ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮಹದೇವ್ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಪಕ್ಷ ಯಾವುದೇ ಇರಲಿ, ಅಭಿವೃದ್ಧಿಗೆ ಕೈಜೋಡಿಸುತ್ತೇವೆ ಎಂದು ಹೇಳಿದರು.
ಶಾಸಕರಾದ ಮಹದೇವ್, ಸಂಸದರಾದ ಪ್ರತಾಪ್ ಸಿಂಹ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.