ಅಂತಿಮ ಹಂತದಲ್ಲಿ ತಾಂತ್ರಿಕ ಬಿಡ್ ಗೆ ಅನುಮೋದನೆ ; ಮೂವರ ತಂಡದಿಂದ ಸರ್ವೇ
– ದೇವನೂರು ಕೆರೆ ಅಭಿವೃದ್ಧಿ ಕುರಿತಂತೆ ಆಂದೋಲನ ದಿನಪತ್ರಿಕೆ ಮಾ.೨೨ರಿಂದ ೧೦ ದಿನಗಳ ಕಾಲ ಅಭಿಯಾನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು
ಮೈಸೂರು: ಅವಸಾನದ ಅಂಚಿಗೆ ತಲುಪಿರುವ ದೇವನೂರು ಕೆರೆಗೆ ಕಾಯಕಲ್ಪ ನೀಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಮುಂದಾಗಿದ್ದು, ಮುಂದಿನ ೨೦ ದಿನಗಳಲ್ಲಿ ದೇವನೂರು ಕೆರೆ ಸಮಗ್ರ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ.
೨೦೨೨-೨೩ನೇ ಸಾಲಿನ ಮುಡಾ ಆಯವ್ಯಯದಲ್ಲಿ ದೇವನೂರು ಕೆರೆ ಅಭಿವೃದ್ಧಿಗೆ ಐದು ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಅದರಂತೆ, ಆರ್ಥಿಕ ಅನುಮತಿ ದೊರೆತು ತಾಂತ್ರಿಕ ಬಿಡ್‌ಗೆ ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಅವರಿಂದ ಒಪ್ಪಿಗೆ ದೊರೆಯುತ್ತಿದ್ದಂತೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ತೀರ್ಮಾನಿಸಿರುವುದರಿಂದ ಜನರ ಬಹು ದಿನಗಳ ಬೇಡಿಕೆ ಈಡೇರುವ ದಿನಗಳು ಸಮೀಪಿಸುತ್ತಿದೆ.
ಸರ್ವೇ ಕಾರ್ಯ: ದೇವನೂರು ಕೆರೆಯು ೧೨.೩೭ ಎಕರೆ ವಿಸ್ತೀರ್ಣಹೊಂದಿದ್ದು, ಕೆರೆಯ ಎಡ ಮತ್ತು ಬಲ ಭಾಗದಲ್ಲಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಮುಡಾ ಸರ್ವೇಯರ್ ಕಾವೇರಿ ಗೌಡ, ರವಿ, ಮಧುಸೂದನ್ ಎಂಬವರು ಮಂಗಳವಾರದಿಂದ ಸರ್ವೇ ಕಾರ್ಯ ಆರಂಭಿಸಿದರು. ಕೆರೆಯ ಸುತ್ತಲೂ ಸರ್ವೇ ಮಾಡಿ ಬೌಂಡರಿ ನಿಗದಿಪಡಿಸುವ ಜತೆಗೆ ತಂತಿಬೇಲಿಯನ್ನು ಹಾಕಲಾಗುತ್ತದೆ. ಕೆರೆ ಅಂಗಳ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳ ಪಟ್ಟಿಯನ್ನು ಮಾಡಿದ ಮೇಲೆ ತೆರವುಗೊಳಿಸಲು ನೋಟಿಸ್ ನೀಡಲಾಗುತ್ತದೆ. ನಗರಪಾಲಿಕೆ ವತಿಯಿಂದ ಖಾತೆ ಮಾಡಿಕೊಟ್ಟಿರುವುದರಲ್ಲದೆ, ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಹಾಗಾಗಿ, ಮುಡಾದಿಂದ ಶೋಕಾಸ್ ನೋಟಿಸ್ ನೀಡಿದ ಮೇಲೆ ತೆರವು ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಹೇಳಿದರು.
ಮುಡಾದಿಂದ ಒಂದು ಬಾರಿ ಸರ್ವೇ ನಡೆಸಿದ ನಂತರ ಸ.ನಂ. ೧೨೪, ೧೨೫, ೧೦೮ ಮತ್ತು ೧೦೯ರ ಪೈಕಿ ಅನಧಿಕೃತವಾಗಿ ೩ ಖಾಸಗಿ ಬಡಾವಣೆಗಳು ತಲೆ ಎತ್ತಿರುವುದಲ್ಲದೆ, ೨೧ ಮನೆಗಳು ತಲೆ ಎತ್ತಿವೆ. ಇವುಗಳನ್ನು ತೆರವುಗೊಳಿಸುವುದಕ್ಕೆ ಬೇಕಾದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಎಸ್‌ಟಿಪಿ ಪ್ಲಾಂಟ್: ಕೆರೆ ಅಭಿವೃದ್ಧಿಪಡಿಸುವ ಜೊತೆಗೆ ಕಲುಷಿತ ನೀರು ಸಂಸ್ಕರಿಸಿ ಮಳೆ ನೀರು ಚರಂಡಿ ನೀರಿನೊಂದಿಗೆ ಹೋಗಲು ಎಸ್‌ಟಿಪಿ ಪ್ಲಾಂಟ್ ಅಳವಡಿಸಲಾಗುತ್ತದೆ. ಕೆರೆಯಲ್ಲಿ ಬೆಳೆದಿರುವ ಗಿಡಗಳು, ಬಂಡ್‌ಗಳನ್ನು ಕ್ಲೀನ್ ಮಾಡಿ ಶುದ್ಧ ನೀರು ನಿಲ್ಲುವಂತೆ ಮಾಡಲಾಗುತ್ತದೆ. ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರು ಮತ್ತೊಂದು ಮಾರ್ಗದ ಮೂಲಕ ಹೋಗಲು ಪ್ರತ್ಯೇಕವಾಗಿ ಪೈಪ್‌ಲೇನ್ ಹಾಕುವುದಕ್ಕೆ ವಿನ್ಯಾಸ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.





