Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ನೀರು ಪೂರೈಕೆಗೆ ಒತ್ತಾಯ : ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ

ಚಾಮರಾಜನಗರ: ನಗರದ 16ನೇ ವಾರ್ಡ್‌ಗೆ ಸೇರಿದ ರೈಲ್ವೆ ಬಡಾವಣೆಯ ನಾಯಕರ ಬೀದಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಬೀದಿಯ ನಿವಾಸಿಗಳು ಖಾಲಿ ಕೊಡಗಳನ್ನು ಪ್ರದರ್ಶಿಸಿ ದಿಢೀರ್‌ ಪ್ರತಿಭಟನೆ ನಡೆಸಿದರು.
ಬೀದಿಯಲ್ಲಿ ಜಮಾಯಿಸಿದ ನಿವಾಸಿಗಳು ನಗರಸಭೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿದರು.
ಕಳೆದ 10 ವರ್ಷಗಳಿಂದ ಬೀದಿಯ 30ಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ಕುಡಿಯುವ ನೀರು ಬರುತ್ತಿಲ್ಲ. ಈ ಬಗ್ಗೆ ನಗರಸಭೆ ಪೌರಾಯುಕ್ತ, ಜಿಲ್ಲಾಧಿಕಾರಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕಳೆದ ಒಂದು ತಿಂಗಳು ನೀರಿನ ಪೈಪ್‌ಲೈನ್ ಅಳವಡಿಸಿದ್ದು, ನೀರು ಮಾತ್ರ ಬಿಟ್ಟಿಲ್ಲ. ಬೀದಿಯಲ್ಲಿರುವ ಬೋರ್ ನೀರು ಕುಡಿಯುತ್ತಾ ಬರಲಾಗಿದೆ. ಕಳೆದ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಅಪಾರ ಮಳೆ ಬಿದ್ದ ಕಾರಣ ಬೋರ್ ನೀರು ಕಲುಷಿತವಾಗಿದೆ. ಆ ನೀರನ್ನು ಕುಡಿದರೆ ಗಂಟಲು, ಮೈಕೈ ಕೆರೆತ, ಜ್ವರ ಬರುತ್ತಿದೆ. ಕೂಡಲೇ ಬೀದಿಗೆ ಕಾವೇರಿ ನೀರು ಪೂರೈಕೆ ಮಾಡಬೇಕು. ಇಲ್ಲದಿದ್ದರೆ ನಗರಸಭೆ ಕಚೇರಿಗೆ ನಿವಾಸಿಗಳೊಂದಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬುಲೆಟ್ ಚಂದ್ರು, ನಿವೃತ್ತ ಪೊಲೀಸ್ ವೆಂಕಟೇಶ್, ಸಿದ್ದರಾಜು, ರಾಜಣ್ಣ, ಕಾಳಶಟ್ಟಿ, ಚಿನ್ನಸ್ವಾಮಿ, ಕಾಳನಾಯಕ, ಮಹದೇವನಾಯಕ, ಸೂರಿ, ಕುಮಾರ್, ಗೌರಮ್ಮ, ರಾಜಮ್ಮ, ರೇಖಾ, ಸುಂದ್ರಮ್ಮ, ಚಂದ್ರಮ್ಮ ಇತರರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ