Mysore
20
overcast clouds
Light
Dark

ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ

ಹನೂರು: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದಪ್ಪನಿಗೆ ಎಣ್ಣೆ ಮಜ್ಜನೆ ಸೇವೆ ಧಾರ್ಮಿಕ ಉತ್ಸವಾಧಿಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮ.ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವವು ಅ.22 ರಿಂದ ಆರಂಭವಾಗಿದ್ದು, ಪ್ರಾಧಿಕಾರದ ವತಿಯಿಂದ ದೇಗುಲದ ಗರ್ಭಗಡಿಯನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆಯಲ್ಲದೇ ಗೋಪುರ ಹಾಗೂ ಆವರಣದ ರಸ್ತೆಗಳನ್ನು ವಿವಿಧ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಸಂಜೆ 6.30ರಿಂದ 8.30ರ ಸ್ವಾಮಿಗೆ ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಲಾಯಿತು. ಸೋಮವಾರ ನರಕ ಚತುರ್ದಶಿಯ ವಿಶೇಷ ಪೂಜೆಯನ್ನು ಸ್ವಾಮಿಗೆ ಸಲ್ಲಿಸಲಾಯಿತು. ಈ ವೇಳೆ ಮಹಾಮಂಗಳಾರತಿ ಬೆಳಗಿಸಿ ನೈವೇದ್ಯ ಅರ್ಪಿಸಿ ದೀವಾಟಿಕೆ ಸೇವೆಯನ್ನು ನೆರವೇರಿಸಲಾಯಿತು. ಬಳಿಕ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ದೇಗುಲದ ಸುತ್ತಾ 3 ಬಾರಿ ಪ್ರದಕ್ಷಿಣೆ ಹಾಕಲಾಯಿತು. ಈ ಸೇವಾ ಕಾರ್ಯಗಳು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನೆರವೇರಿತು.

ಸಂಜೆ 7ರಲ್ಲಿ ದೇಗುಲದ ಆವರಣದಲ್ಲಿ ಚಿನ್ನದ ತೇರಿನ ಉತ್ಸವವು ಸಾವಿರಾರು ಭಕ್ತರ ಸಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ಹರಕೆ ಹೊತ್ತ ದಂಡಿನ ಕೋಲನ್ನು ಹೊತ್ತು ದೇಗುಲದ ಸುತ್ತಾ ಪ್ರದಕ್ಷಿಣೆ ಹಾಕಿದರಲ್ಲದೇ ಕೆಲವರು ತೇರಿಗೆ ಹಣ್ಣ ಧವನ, ಧನ, ಧಾನ್ಯ ಎಸೆದು ಮಾದಪ್ಪನ ಕೃಪೆಗೆ ಪಾತ್ರರಾದರು. ಈ ವೇಳೆ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.

ಚಾ.ನಗರ ಮೈಸೂರು, ರಾಮನಗರ, ಮಂಡ್ಯ, ಕನಕಪುರ, ಚನ್ನಪಟ್ಟಣ, ಹಲಗೂರು, ಸಾತನೂರು, ಮದ್ದೂರು, ಮಳವಳ್ಳಿ, ನಂಜನಗೂಡು, ಹೆಚ್.ಡಿ. ಕೋಟೆ, ಪಿರಿಯಾಪಟ್ಟಣ ಸೇರಿದಂತೆ ಇನ್ನಿತರೆ ಕಡೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಕಾಲ್ನಡಿಗೆಯಲ್ಲಿ ತೆರಳಿದ್ದು, ಮ.ಬೆಟ್ಟದಲ್ಲಿಯೇ ಬೀಡು ಬಿಟ್ಟಿದ್ದಾರೆ. ಹರಕೆ ಹೊತ್ತ ಭಕ್ತರು ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕುವುದರ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇನ್ನು ಹರಕೆಹೊತ್ತ ಕೆಲ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ದೇಗುಲದ ಸುತ್ತ ಕಸ ತೆಗೆಯುವ ಕಾರ್ಯ (ರಜಾ ಹೊಡೆಯುವ ಸೇವೆ) ವನ್ನು ಕೈಗೊಳ್ಳುವುದರ ಮೂಲಕ ತಮ್ಮ ಹರಕೆಯನ್ನು ತೀರಿಸಿದರಲ್ಲದೇ ಕೆಲವರು ಪರ ಸೇವೆಯನ್ನು ನೆರವೇರಿಸಿ ಅನ್ನ ಸಂತರ್ಪಣೆ ಮಾಡಿದರು.

ಪ್ರಾಧಿಕಾರ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ದಾಸೋಹ ವ್ಯವಸ್ಥೆ ಮಾಡಲಾಗಿತ್ತಲ್ಲದೇ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ