ಮೈಸೂರು: ಯೋಗ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಯೋಗ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಂಡು ಯಶಸ್ವಿಗೊಳಿಸಿದರು.
ನಗರದ ವಸ್ತುಪ್ರದರ್ಶನದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಯೋಗ ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ ಅವರು, ಯೋಗ ಸ್ಪರ್ಧೆಗೆ ಹೆಚ್ಚು ಮಂದಿ ಭಾಗವಹಿಸುವ ಮೂಲಕ ಯೋಗದ ಮಹತ್ವವನ್ನು ತಿಳಿಸಿದ್ದೀರಿ. ಮುಂದಿನ ದಿನಗಳಲ್ಲಿ ಸ್ಪರ್ಧಿಗಳ ಸಂಖ್ಯೆ ಇನ್ನಷ್ಟೂ ಹೆಚ್ಚುವ ಮೂಲಕ ಯೋಗದ ಮಹತ್ವ ಎಲ್ಲರಿಗೂ ತಿಳಿಯಬೇಕು ಎಂದು ಹೇಳಿದರು.
ಒಟ್ಟು 11 ವಿಭಾಗಗಳಲ್ಲಿ ಯೋಗ ಸ್ಪರ್ಧೆಗಳನ್ನು ಆಯೋಜಿ ಸಲಾಗಿತ್ತು. ಪ್ರತಿ ವಿಭಾಗಗಳಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀ ಯ ಬಹುಮಾನ ನೀಡಲಾಯಿತು. ಇದರ ಜತೆಗೆ ಪ್ರತಿ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಮೂವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ನಿರೀಕ್ಷೆಗೂ ಮೀರಿದ ಸ್ಪರ್ಧಿಗಳು
ಯೋಗ ಸ್ಪರ್ಧೆಯಲ್ಲಿ ಸುಮಾರು ೧ ಸಾವಿರ ಮಂದಿ ಯೋಗಪಟುಗಳು ಭಾಗವಹಿಸಬಹುದು ಎಂದು ಸಂಘಟಕರು ಅಂದಾಜಿಸಿದ್ದರು. ಆದರೆ, ನಿರೀಕ್ಷೆಗೂ ಮೀರಿ ಸ್ಪರ್ಧಿಗಳು ಜಮಾಯಿಸಿದ್ದರು. ಹೀಗಾಗಿ ನಾಲ್ಕು ವೇದಿಕೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು.
ಸಂಸದ ಪ್ರತಾಪ್ ಸಿಂಹ, ಆಯುಷ್‌ನ ಡಾ.ಲಕ್ಷ್ಮಿ ನಾರಾಯಣ ಶೆಣೈ, ಶ್ರೀಹರಿ, ಡಾ.ಪುಷ್ಪ, ಡಾ.ಕುಸುಮಾ, ಗಜಾನನ ಹೆಗಡೆ, ಡಾ.ಮಹೇಶ್, ದೇವರಾಜ್ ಮುಂತಾದವರು ಹಾಜರಿದ್ದರು. ಸಂಜೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.





