Mysore
24
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ದಸರಾ ಆನೆ ಲಕ್ಷ್ಮಿಗೂ ಅರಮನೆಗೂ ಇರುವ ನಂಟೇನು ಗೊತ್ತಾ ?

ಆಂದೋಲನ ವಿಶೇಷ
ಮೈಸೂರು: ಮೈಸೂರು: ಗಂಡಾನೆ ಮರಿಗೆ ಜನ್ಮ ನೀಡಿರುವ ದಸರೆ ಆನೆ ಲಕ್ಷ್ಮಿ ಈಗ ಮೈಸೂರು ಅರಮನೆ ಆವರಣದಲ್ಲಿ ಬಾಣಂತನದ ಸಂಭ್ರಮದಲ್ಲಿದೆ. ಲಕ್ಷ್ಮಿ ಪುತ್ರನಿಗೆ ಸ್ವತ: ರಾಜವಂಶಸ್ಥೆ ಪ್ರಮೋದಾದೇವಿ ಅವರೇ “ಶ್ರೀ ದತ್ತಾತ್ತೇಯʼ ಎಂದು ನಾಮಕರಣವನ್ನೂ ಮಾಡಿದ್ದಾರೆ. ಆದರೆ ಲಕ್ಷ್ಮಿಗೂ ರಾಜಮನೆತನಕ್ಕೂ ಇರುವ ನಿಕಟ ಸಂಬಂಧದ ವಿಚಾರ ನಿಮಗೆ ಗೊತ್ತಾ ? ಮರಿಯಾಗಿದ್ದ ಈ ಆನೆಯನ್ನು ಪೋಷಿಸಿ ಬೆಳೆಸಿದ್ದು ಮಹಾರಾಜ ಜಯಚಾಮರಾಜ ಒಡೆಯರ್ ಅವರ ಕೊನೆಯ ಪುತ್ರಿ ವಿಶಾಲಾಕ್ಷಿ ದೇವಿ ಅವರು. ಶ್ರೀಕಂಠದತ್ತ ಒಡೆಯರ್ ಅವರ ಕೊನೆಯ ತಂಗಿ ವಿಶಾಲಾಕ್ಷಿ ದೇವಿ ಮತ್ತವರ ಪತಿ ಗಜೇಂದ್ರ ಸಿಂಗ್ ದಂಪತಿಯ ವನ್ಯಜೀವಿ ಪ್ರೇಮ ಮೈಸೂರಿನ ಎಲ್ಲರಿಗೂ ತಿಳಿದ ವಿಚಾರ.
ಈ ದಂಪತಿ ಬಂಡೀಪುರದಲ್ಲಿ ʼಟಸ್ಕರ್ ಟ್ರೈಲ್ಸ್ʼ ಹೆಸರಿನಲ್ಲಿ ಅನಾಥ ಕಾಡು ಪ್ರಾಣಿಗಳ ಆರೈಕೆಗಾಗಿಯೇ ರೆಸಾರ್ಟ್ ವೊಂದನ್ನು ತೆರೆದಿದ್ದರು. ಅರಣ್ಯ ಇಲಾಖೆ ಕೊಡ ಮಾಡಿದ ಎರಡು ಚಿರತೆ ಮರಿಗಳು ಇವರ ಕುಟುಂಬದ ಭಾಗವಾಗಿಯೇ ಬೆಳೆದಿದ್ದವು. ಈ ಚಿರತೆ ಮರಿಗಳನ್ನು ಬೆಳೆದು ದೊಡ್ಡದಾದ ಬಳಿಕ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಅರಣ್ಯದತ್ತ ಇವರು ಬಂದಾಗಲೆಲ್ಲಾ ಈ ಚಿರತೆ ಜೋಡಿ ಇವರನ್ನು ಕಂಡು ಓಡೋಡಿ ಬಂದು ಜೀಪು ಏರುತ್ತಿತ್ತು. ಕಾಡಾನೆ ಮರಿಯಾಗಿ ತಾಯಿಯಿಂದ ಬೇರ್ಪಟ್ಟಿದ್ದ ಲಕ್ಷ್ಮೀ ಕೂಡ ಇವರ ಪೋಷಣೆಯಲ್ಲಿ ಬೆಳೆದಿದ್ದಳು. ಲಕ್ಷ್ಮೀ ದೊಡ್ಡವಳಾಗುವ ಹೊತ್ತಿಗೆ ಆನೆ ಸೇರಿದಂತೆ ಕಾಡು ಪ್ರಾಣಿಗಳನ್ನು ಸಾಕುವುದನ್ನು ನಿರ್ಬಂಧಿಸುವ ನ್ಯಾಯಾಲಯದ ಆದೇಶ ಹೊರ ಬಿದ್ದಿತ್ತು.
ಕಾಡು ಸೇರಿದ ಲಕ್ಷ್ಮಿ ಅಲ್ಲಿನ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟಪಟ್ಟಿದ್ದಳು. ನಂತರ ಆಕೆಯನ್ನು ಅರಣ್ಯ ಇಲಾಖೆ ಶಿಬಿರಕ್ಕೆ ಸೇರಿಸಲಾಗಿತ್ತು. ಮೊದಲಿನಿಂದಲೂ ಮನುಷ್ಯರ ಒಡನಾಟದಲ್ಲಿ ಬೆಳೆದ ಆಕೆಯನ್ನು ದಸರೆ ಗಜಪಡೆಗೂ ಸೇರಿಸಿಕೊಳ್ಳಲಾಗಿತ್ತು. ಈ ಬಾರಿಯೂ ಗಜ ಪಡೆಯ ಭಾಗವಾಗಲು ಬಂದ ಆಕೆ ಗರ್ಭಿಣಿಯಾಗಿರುವ ವಿಚಾರ ಅರಣ್ಯ ಇಲಾಖೆಗೆ ತಿಳಿದಿರಲಿಲ್ಲ.

ದಸರೆಯ ತಂಡದ ಭಾಗವಾಗಿ ಕಳೆದ ಒಂದು ತಿಂಗಳಿನಿಂದ ಉತ್ತಮ ಆರೈಕೆ ಪಡೆದ ಲಕ್ಷ್ಮಿ ಈಗ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಅರಮನೆಯ ಆವರಣದಲ್ಲಿಯೇ ಬಾಣಂತನದ ಆರೈಕೆ ಪಡೆಯುತ್ತಿದ್ದಾಳೆ. ಲಕ್ಷ್ಮಿಯನ್ನು ಬಾಲ್ಯದಲ್ಲಿ ಸಾಕಿ ಬೆಳೆಸಿದ ರಾಜವಂಶಸ್ಥೆ ವಿಶಾಲಾಕ್ಷಿ ಈಗ ನಮ್ಮೊಂದಿಗಿಲ್ಲ. 2018ರ ಅಕ್ಟೋಬರಿನಲ್ಲಿ ವಿಜಯ ದಶಮಿ ದಿನವೇ ಅವರು ನಿಧನರಾಗಿದ್ದರು. ಅವರು ಇದ್ದಿದ್ದರೆ ಲಕ್ಷ್ಮಿಯನ್ನು ಕಂಡು ಎಲ್ಲರಿಗಿಂತ ಹೆಚ್ಚು ಸಂಭ್ರಮಿಸುತ್ತಿದ್ದರು. ಇದೇ ನೆನಪಿನಲ್ಲಿ ಡಿಸಿಎಫ್ ಡಾ. ವಿ.ಕರಿಕಾಳನ್ ಅವರು ಲಕ್ಷ್ಮಿಗೆ ಹೆಸರಿಡುವಂತೆ ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಕೇಳಿಕೊಂಡಿದ್ದರು. ಅವರು ಅರಮನೆ ನಂಟಿರುವ ಆನೆಗೆ ತಮ್ಮ ಪತಿ ಶ್ರೀಕಂಠದತ್ತ ಒಡೆಯರ್ ಅವರ ನೆನಪಿನಲ್ಲಿ ʼ ಶ್ರೀ ದತ್ತಾತ್ತೇಯʼ ಎಂದು ಹೆಸರಿಟ್ಟಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ