ಸುರಕ್ಷತಾ ಕ್ರಮ ಕೈಗೊಳ್ಳಲು ಇನ್ನೆಷ್ಟು ದಿನ ಬೇಕು?: ಅರಣ್ಯ ಇಲಾಖೆ, ಕಾವೇರಿ ನೀರಾವರಿ ನಿಗಮಕ್ಕೆ ಸ್ಥಳೀಯರ ಪ್ರಶ್ನೆ
-ಹೇಮಂತ್‌ಕುಮಾರ್
ಮಂಡ್ಯ: ‘ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನು ಇಟ್ಟಿದ್ದೇವೆ. ಕ್ಯಾಮರಾ ಹಾಕಿದ್ದೇವೆ ಅನ್ನುತ್ತಾರೆ. ಕಾವೇರಿ ನೀರಾವರಿ ನಿಗಮದವರು ಚಿರತೆ ಬರುವ ದಾರಿಗೆ ಬೇಲಿ ಹಾಕುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ಎಷ್ಟು ದಿನ ಬೇಕು ಅಂಥ ಹೇಳಲಿ. ಅಲ್ಲಿಯವರೆಗೂ ನಾವೂ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಕಾಯುತ್ತೇವೆ ’.
ನಿತ್ಯ ಐದಾರು ಸಾವಿರ ಪ್ರವಾಸಿಗರು ಆಗಮಿಸಿ ಹಲವಾರು ಕುಟುಂಬಗಳ ನಿತ್ಯದ ತುತ್ತಿಗೆ ಆಸರೆಯಾಗಿರುವ ವಿಶ್ವಪ್ರಸಿದ್ದ ಕೃಷ್ಣರಾಜಸಾಗರ ಬೃಂದಾವನ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿತು ಎನ್ನುವ ಕಾರಣಕ್ಕೆ ಬಂದ್ ಆಗಿರುವುದರಿಂದ ತೊಂದರೆಗೆ ಒಳಗಾಗಿರುವ ಸಣ್ಣ ಹಾಗೂ ಸಣ್ಣ ವ್ಯಾಪಾರಿಗಳ ಆಕ್ರೋಶದ ನುಡಿಯಿದು.
ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಒಂದು ವಾರದ ಮಟ್ಟಿಗೆ ಗಾರ್ಡನ್ ಬಂದ್ ವಾಡಿ ಜನರು, ಪ್ರವಾಸಿಗರ ಪ್ರವೇಶ ತಡೆದಿದ್ದರು. ಇದೀಗ ಈ ವಾರ ಪದೇ ಪದೇ ವಿಸ್ತರಣೆಾಂಗಿ ಇದೀಗ ೧೭ ದಿನಗಳಿಗೆ ಬಂದು ನಿಂತಿದೆ.
ವಿಳಂಬ ಏಕೆ?: ಕಾವೇರಿ ಗಲಾಟೆ ಇಲ್ಲವೇ ಅನಿವಾರ‌್ಯ ಸಂದರ್ಭದಲ್ಲಿ ಕೆಆರ್‌ಎಸ್ ಬಂದ್ ಮಾಡಲಾಗ್ತುದೆ. ಕೋವಿಡ್ ವೇಳೆ ಬಹುತೇಕ ಒಂದು ವರ್ಷ ಕೆಲಸವೇ ಇಲ್ಲದೇ ಬದುಕಿದವರು ಈಗ ಪ್ರವಾಸೋದ್ಯಮ ಚೇತರಿಸಿಕೊಂಡಿದು ಎಂದು ನಿಟ್ಟುಸಿರು ಬಿಡುವಾಗಲೇ ಚಿರತೆ ಕಾರಣ ನೆಪವೊಡ್ಡಿ ಅದನ್ನು ಸೆರೆ ಹಿಡಿಯುವ ಇಲ್ಲವೇ ಕೆಆರ್‌ಎಸ್ ಪ್ರವಾಸೋದ್ಯಮ ವಲಯದಲ್ಲಿ ಬಾರದಂತೆ ತಡೆಯುವ ಕೆಲಸವನ್ನು ತುರ್ತಾಗಿ ಅರಣ್ಯ ಇಲಾಖೆಯವರಾಗಲಿ, ಕಾವೇರಿ ನೀರಾವರಿ ನಿಗಮದವರಾಗಲಿ ಮಾಡುತ್ತಿಲ್ಲ ಎನ್ನುವುದು ಸ್ಥಳೀಯರ ಸಿಟ್ಟಿನ ಮೂಲ.
ಮೈಸೂರು ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿರುವುದರಿಂದ ಪ್ರವಾಸಿ ಸ್ಥಳದಲ್ಲಿ ಅನಾಹುತವಾದರೆ ಯಾರು ಹೊಣೆ ಎನ್ನುವ ಕಾಳಜಿ ನಮಗೂ ಇದೆ. ಹಾಗೆಂದು ಚಿರತೆ ಒಮ್ಮೆಯೂ ಹಗಲು ವೇಳೆ ಕಂಡಿಲ್ಲ. ರಾತ್ರಿ ಸಂಚಾರ ಮಾಡಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ. ಹೀಗಿದ್ದ ಮೇಲೆ ಅರಣ್ಯ ಇಲಾಖೆ, ಕಾವೇರಿ ನೀರಾವರಿ ನಿಗಮ, ತಾಲ್ಲೂಕು ಆಡಳಿತದವರು ಕುಳಿತು ಮಾರ್ಗೋಪಾಯಗಳನ್ನು ಕಂಡುಕೊಂಡು ಸಮಸ್ಯೆ ಬಗೆಹರಿಸಬೇಕು. ಬೇಲಿ ಹಾಕಿ ಬಿಗಿಗೊಳಿಸಬೇಕು. ಅದನ್ನು ಬಿಟ್ಟು ಇನ್ನೆಷ್ಟು ದಿನ ಕೆಆರ್‌ಎಸ್ ಮುಚ್ಚಿ ಜನರಿಗೆ ತೊಂದರೆ ಕೊಡುತ್ತೀರಿ’ ಎಂದು ವ್ಯಾಪಾರಿಗಳು ಪ್ರಶ್ನಿಸುತ್ತಾರೆ.
ಬೃಂದಾವನ ನೋಡಲೆಂದು ೧೦೦೦ ಕಿ. ಮಿ. ದೂರದ ಮಹಾರಾಷ್ಟ್ರದಿಂದ ಬಂದಿದ್ದೇವೆ. ಇಲ್ಲಿ ಚಿರತೆ ಬಂದಿರುವುದಕ್ಕೆ ಕೆಆರ್‌ಎಸ್ ಬಂದ್ ಮಾಡಲಾಗಿದೆ ಎಂದು ತಿಳಿಸಲಾಯಿತು. ಚಿರತೆ ಜೀವ ಮುಖ್ಯ ಹೌದು. ಪ್ರವಾಸಿಗರ ಸುರಕ್ಷತೆಹೂ ಅಷ್ಟೇ ಮುಖ್ಯ. ಹಾಗೆಂದು ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಆಗಿಲ್ಲ ಎಂದರೆ ಬೇಸರವಾಗುತ್ತದೆ ಎಂದು ನಾಂದೇಡ್‌ನಿಂದ ಬಂದಿದ್ದ ಪ್ರವಾಸಿಗರು ಬೇಸರ ಹೊರ ಹಾಕಿದರು.
ನಷ್ಟದ ಅಂದಾಜು ಎಷ್ಟು?
ಕೆಆರ್‌ಎಸ್‌ನಲ್ಲಿ ಹತ್ತಾರು ರೀತಿುಂ ಅಲಂಕಾರಿಕ ಗಿಡಗಳು, ಕಾರಂಜಿ, ನೀರಿನ ಹಲವು ರೀತಿುಂ ತಾಂತ್ರಿಕತೆುಂ ನರ್ತನ, ಉತ್ತರ ಬೃಂದಾವನದಲ್ಲಿ ನಿರ್ವಾಣವಾಗಿರುವ ರಾಜ್ಯದ ಪ್ರಥಮ ನೃತ್ಯ ಕಾರಂಜಿುಂ ಬಣ್ಣದ ಸೊಬಗು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿ ವುಂಸ್ಕರಿಗೆ ೫೦ ರೂ., ಮಕ್ಕಳಿಗೆ ೧೦ ರೂ., ವಿದೇಶಿುಂರಿಗೆ ೨೦೦ ರೂ.ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ, ಪಾರ್ಕಿಂಗ್ ಶುಲ್ಕ, ಬೋಟಿಂಗ್, ಗಾರ್ಡನ್ ಒಳಗೆ ಅಂಗಡಿ ಮುಂಗಟ್ಟು ವಹಿವಾಟು, ಮೀನು ಹೋಟೆಲ್‌ಗಳು ಸೇರಿದಂತೆ ಎಲ್ಲ ಬಗೆುಂ ಆರ್ಥಿಕ ಚಟುವಟಿಕೆಗಳೂ ಬಂದ್ ಆದಂತಾಗಿದೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದನ್ನು ಪುಷ್ಟೀಕರಿಸುತ್ತಾರೆ. ‘ಕೆಆರ್‌ಎಸ್‌ಗೆ ಪ್ರತಿನಿತ್ಯ ಐದು ಸಾವಿರ ಜನ ಬರುತ್ತಾರೆ. ರಜೆ ದಿನಗಳು, ವಾರಾಂತ್ಯದಲ್ಲಿ ೨ರಿಂದ ೩ ಪಟ್ಟು ಹೆಚ್ಚುತ್ತದೆ. ಪ್ರವೇಶ ಶುಲ್ಕದ ರೂಪದಲ್ಲಿಯೇ ನಿತ್ಯ ೧ ಲಕ್ಷದಿಂದ ೩ ಲಕ್ಷ ರೂ. ಬರುತ್ತದೆ. ರಜೆ ದಿನದಲ್ಲಿ ಇದು ಹೆಚ್ಚಾಗುವುದು ನಿಜ. ಪರೋಕ್ಷವಾಗಿ ನಡೆಯುವ ವಹಿವಾಟು ಇದಕ್ಕಿಂತ ಹೆಚ್ಚು. ಕೋವಿಡ್ ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಇಷ್ಟು ದಿನ ಕೆಆರ್‌ಎಸ್ ಬಂದ್ ಆದ ಉದಾಹರಣೆ ಇಲ್ಲ ಎನ್ನುತ್ತಾರೆ.
ಅರಣ್ಯ ಇಲಾಖೆ ಏನು ಮಾಡುತ್ತಿದೆ?: ಕೆಆರ್‌ಎಸ್ ಮುಚ್ಚುವ ಹಿಂದೆ ಅರಣ್ಯ ಇಲಾಖೆಯ ವೈಫಲ್ಯವೇ ಕಾರಣ ಎಂದು ಸ್ಥಳೀಯರು ನೇರ ಆರೋಪ ಮಾಡುತ್ತಾರೆ. ಏಕೆಂದರೆ ಚಿರತೆ ಇರುವುದು ನಿಜ. ಅದರೊಟ್ಟಿಗೆ ಮುಳ್ಳುಹಂದಿ ಇತರೆ ಪ್ರಾಣಿಗಳು ಇವೆ. ವನ್ಯಜೀವಿ ಮಾನವ ಸಂಘರ್ಷ ಅರಣ್ಯದಂಚಿನಲ್ಲಿ ಇದೆ. ಆದರೆ ಪ್ರವಾಸಿ ಸ್ಥಳಗಳ ಸುತ್ತಲೂ ಇಲಾಖೆ ಸುರಕ್ಷತೆಗೆ ಕ್ರಮ ಕೈಗೊಳ್ಳದಿದ್ದರೆ ಹೇಗೆ ಎಂದು ಆರೋಪಿಸುತ್ತಾರೆ. ಆದೆ ಅರಣ್ಯ ಇಲಾಖೆ ಮಾತ್ರ ಒಂದು ತಿಂಗಳಿನಿಂದ ಕೆಆರ್‌ಎಸ್ ಸುತ್ತ ಸಕ್ರಿಯವಾಗಿದೆ. ಚಿರತೆ ಕಂಡ ನಂತರವಂತೂ ೩೦ಕ್ಕೂ ಹೆಚ್ಚು ಸಿಬ್ಬಂದಿ, ೬೦ ಕ್ಯಾಮರಾಗಳು, ೭ ಬೋನುಗಳೊಂದಿಗೆ ಚಿರತೆ ಸೆರೆಗೆ ಕಾರ‌್ಯನಿರ್ವಹಿಸುತ್ತಿದ್ದಾರೆ.ಡಿಸಿಎಫ್ ರುದ್ರನ್ ನೇತೃತ್ವದಲ್ಲಿ ನಿತ್ಯ ಕ್ಯಾಮರಾ ಮಾಹಿತಿ ಸಂಗ್ರಹ, ಚಿರತೆ ಹಾಗೂ ಇತರೆ ಪ್ರಾಣಿಗಳ ಚಲನವಲನದ ಮಾಹಿತಿ ಪಡೆಯುತ್ತಾಲೇ ಇರುತ್ತಾರೆ. ಆದರೂ ಚಿರತೆ ಸಿಗದೇ ಇರುವುದು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ.
ನಾವು ಮುಚ್ಚಲು ಹೇಳಿಲ್ಲ
ಕೆಆರ್‌ಎಸ್ ಸುತ್ತಮುತ್ತ ಚಿರತೆ ಸಮಸ್ಯೆ ಇರುವುದು ನಿಜ. ಇಲಾಖೆಯಿಂದಲೂ ನಿರಂತರ ಕಾರ್ಯಾಚರಣೆ ಹಲವು ಆಯಾಮಗಳಲ್ಲಿ ನಡೆಯುತ್ತಿದೆ. ಹಗಲು ವೇಳೆ ಚಿರತೆ ಒಮ್ಮೆಯೂ ಕಂಡಿಲ್ಲ. ರಾತ್ರಿ ಮಾತ್ರ ಸಂಚರಿಸುತ್ತಿರುವುದು ಕ್ಯಾಮರಾದಿಂದ ಕಂಡು ಬರುತ್ತಿದೆ. ಜನ ನಮ್ಮ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಬಹುದು. ಆದರೆ ಕೆಆರ್‌ಎಸ್ ಬಂದ್ ಮಾಡಿ ಎಂದು ನಾವು ಹೇಳಿಲ್ಲ. -ರುದ್ರನ್, ಡಿಸಿಎಫ್ ಮಂಡ್ಯ
ಒಂದೆರಡು ದಿನದಲ್ಲಿ ತೀರ್ಮಾನ
ಚಿರತೆ ಕಾಟದಿಂದ ಕೆಆರ್‌ಎಸ್ ಬಂದ್ ಮಾಡಿದ್ದೇವೆ. ವ್ಯಾಪಾರಿಗಳ ನಿತ್ಯದ ಬದುಕಿಗೆ ತೊಂದರೆಯಾಗಿದೆ.ಆದರೆ ಅಂತರಾಷ್ಟ್ರೀಯ ಪ್ರವಾಸಿ ಸ್ಥಳವಾಗಿರುವುದರಿಂದ ಸುರಕ್ಷತೆ ಬಹುಮುಖ್ಯ. ಪ್ರವಾಸಿಗರು ರಾತ್ರಿ ೯ರವರೆಗೂ ಕೆಆರ್‌ಎಸ್‌ನಲ್ಲಿ ಇರುತ್ತಾರೆ. ಈ ವೇಳೆ ಅನಾಹುತವಾದರೆ ಯಾರು ಹೊಣೆ ಎನ್ನುವುದು ನಮ್ಮ ಪ್ರಶ್ನೆ. ಆದರೂ ಚಿರತೆ ವಿಸಿ ನಾಲೆ ತೂಬಿನ ಕಡೆಯಿಂದ ಬರುವ ಮಾಹಿತಿ ಇರುವದರಿಂದ ಅಲ್ಲಿ ಬೇಲಿ ಹಾಕುತ್ತೇವೆ. ಒಂದೆರಡು ದಿನದಲ್ಲಿ ಕೆಆರ್‌ಎಸ್ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. -ಶಂಕರೇಗೌಡ, ಎಂಡಿ ಕಾವೇರಿ ನೀರಾವರಿ ನಿಗಮ.