ಮೈಸೂರು: ನಗರದ ಎಲೆ ತೋಟದ ಬಳಿ ಮಂಗಳವಾರ ಕೂಡ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರು ಇದು ಮಾಮೂಲು ಎಂದು ಸುಮ್ಮನಾಗಿದ್ದಾರೆ. ಮೊಸಳೆ ಹಿಡಿಯಲು ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಕೆಸರಿನ ಕಾರಣ ಬರಿಗೈಲಿ ವಾಪಸ್ಸಾಗಿದ್ದಾರೆ.
ಎಲೆತೋಟದಲ್ಲಿ ಒಂದಕ್ಕಿಂತ ಹೆಚ್ಚು ಮೊಸಳೆಗಳಿವೆ. ಎಂಬದು ಸಾರ್ವಜನಿಕರ ಅರಿವಿಗೆ ಬಂದಿದೆ. ಮಂಗಳವಾರ ಕೂಡ ಮೋರಿಯಲ್ಲಿ ಇದ್ದ ತೆಂಗಿನ ಮರದ ಮೇಲೆ ಕೆಲಕಾಲ ಕುಳಿತ ಮೊಸಳೆ ನಂತರ ಅಲ್ಲಿಂದ ನಾಪತೆಯಾಗಿದೆ. ಇದನ್ನು ಕಂಡ ಸಾರ್ವಜನಿಕರು ಇದು ಮಾಮೂಲು ಎಂಬಂತೆ ಸುಮ್ಮನಾಗಿದ್ದಾರೆ.
ಆದರೆ, ಇಲ್ಲಿನ ಅಡಿಕೆ ತೋಟದ ಮಧ್ಯೆ ವೀಳ್ಯದೆಲೆ ಬೆಳೆಯುವ ಜನರು ಈಗ ತೋಟಕ್ಕೆ ಹೋಗಲು ಹೆದರುತ್ತಿದ್ದಾರೆ. ಮೊಸಳೆ ಆಗಾಗ ಇಲ್ಲಿನ ಸಣ್ಣ ಸೇತುವೆ ಮೇಲೆ ಬಂದು ಮಲಗಿರುತ್ತದೆ. ಮನುಷ್ಯರ ಹೆಜ್ಜೆ ಸಪ್ಪಳವಾದ ತಕ್ಷಣ ಚರಂಡಿಗೆ ಹಾರಿ ಮಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಐದು ಮಂದಿ ಸಿಬ್ಬಂದಿ ಎಲೆ ತೋಟದ ಬಳಿಗೆ ಬಂದು ಪರಿಶೀಲನೆ ನಡೆಸಿದರು. ಮೋರಿ ಹಾಗೂ ಕೆಸರಿನ ನಡುವೆ ಮೊಸಳೆ ಅಡ್ಡಾಡುತ್ತಿರುವ ಕಾರಣ ಹಿಡಿಯುವುದು ಕಷ್ಟ ಎಂದು ಹೇಳಿ ವಾಪಸ್ಸಾಗಿದ್ದಾರೆ.





