ಬ್ರಾಹ್ಮಣ ಸಮುದಾಯದ ಬಗ್ಗೆ ನನಗೆ ಗೌರವವಿದೆ
ಮೈಸೂರು: ಬ್ರಾಹ್ಮಣ ಸಮುದಾಯದ ಬಗ್ಗೆ ನನಗೆ ಗೌರವ ಇದೆ, ವಿವಾದವನ್ನು ಮುಂದುವರಿಸಿಕೊಂಡು ಹೋಗುವುದು ಬೇಡ. ಹಾಗಾಗಿ ಪ.ಮಲ್ಲೇಶ್ ಅವರು ಬ್ರಾಹ್ಮಣರ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸುವಂತೆ ತಿಳಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ.ಮಲ್ಲೇಶ್ ಅವರು ಮೈಸೂರಿನಲ್ಲಿ ನಡೆದ ಸಿದ್ದರಾಮಯ್ಯಅವರ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರ ಜತೆ ಮಾತನಾಡಿರುವ ಸಿದ್ದರಾಮಯ್ಯ, ಸಮಾಜದಲ್ಲಿನ ಎಲ್ಲ ಸಮುದಾಯಗಳ ಬಗ್ಗೆ ನನಗೆ ಗೌರವವಿದೆ. ಇದುವರೆಗಿನ ರಾಜಕಾರಣದಲ್ಲಿ ನಾನು ಯಾವ ಸಮುದಾಯವನ್ನು ಅಗೌರವದಿಂದ ಕಂಡಿಲ್ಲ, ಮೈಸೂರಿನಲ್ಲಿ ಪ.ಮಲ್ಲೇಶ್ ಹೇಳಿಕೆ ಕುರಿತು ಉಂಟಾಗಿರುವ ವಿವಾದವನ್ನು ಮುಂದುವರಿಸಿಕೊಂಡು ಹೋಗುವುದು ಬೇಡ. ಇದನ್ನು ಇಲ್ಲಿಗೇ ನಿಲ್ಲಿಸಿ ಎಲ್ಲರೂ ಒಟ್ಟಿಗೆ ಹೋಗಬೇಕಿದೆ. ಇದೇ ಹಿನ್ನೆಲೆಯಲ್ಲಿ ಮಲ್ಲೇಶ್ ಅವರು ತಮ್ಮ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇನ್ನು ಮುಂದೆ ಯಾವುದೇ ವಿವಾದಗಳಿಗೂ ಅವಕಾಶಮಾಡಿ ಕೊಡುವುದು ಬೇಡ ಎಂದಿದ್ದಾರೆ.