ಅಕಾಲಿಕ ಮಳೆ, ಕಾರ್ಮಿಕರ ಸಮಸ್ಯೆಯಿಂದ ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಬರೆ
-ಲಕ್ಷ್ಮಿಕಾಂತ್ ಕೋವಾರಪ್ಪ
ಸೋಮವಾರಪೇಟೆ: ಹವಾವಾನ ವೈಫರೀತ್ಯ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಅವಧಿಗೂ ಮುಂಚೆಯೇ ಅರೇಬಿಕಾ ಕಾಫಿ ಹಣ್ಣಾಗಿದ್ದು, ಕೆಲವು ಕಡೆಗಳಲ್ಲಿ ಕಾಫಿ ಕೊಯ್ಲು ಆರಂಭವಾಗಿದೆ. ಸಾಮಾನ್ಯವಾಗಿ ನವೆಂಬರ್ ಕೊನೇ ವಾರ ಹಾಗೂ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಆರಂಭವಾಗುತ್ತದೆ. ಅದರೆ ಕಳೆದ ಅಕ್ಟೊಂಬರ್‌ನಲ್ಲಿ ಸುರಿದ ಮಳೆಯಿಂದ ಈಗ ಕಾಫಿ ಹಣ್ಣಾಗುತ್ತಿದೆ. ಇದರಿಂದ ಬೆಳೆಗಾರರಿಗೆ ಮತ್ತಷ್ಟು ಹೊರೆಯಾಗುತ್ತಿದ್ದು ಸಂಕಷ್ಟ ಎದುರಿಸುವಂತಾಗಿದೆ. ಕಾಫಿ ಪಸಲು ಸಂಪೂರ್ಣವಾಗಿ ಹಣ್ಣಾದ ನಂತರ ಒಂದೇ ಬಾರಿ ಕೊಯ್ಲು ಮಾಡಿದರೆ ಸುಲಭವಾಗುತ್ತದೆ. ಅದರೆ ಇದೀಗ ಗಿಡದಲ್ಲಿ ಅರ್ಧದಷ್ಟು ಫಸಲು ಹಣ್ಣಾಗಿದ್ದು ಎರಡರಿಂದ ಮೂರು ಬಾರಿ ಕೊಯ್ಲು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹಣ್ಣಾಗಿರುವ ಕಾಫಿಯನ್ನು ಗಿಡದಲ್ಲೇ ಬಿಟ್ಟರೆ ಬಂದಿರುವ ಫಸಲು ನೆಲಕಚ್ಚುವ ಭೀತಿಯಿಂದಾಗಿ ಹೊರೆಯಾದರು ಕಾರ್ಮಿಕರಿಂದ ಫಸಲನ್ನು ಕೊಯ್ಲು ಮಾಡಿಸಿ ಒಣಗಿಸುವ ಪ್ರಕ್ರಿಯೆಯಲ್ಲಿ ಕೆಲವು ಬೆಳೆಗಾರರು ತೊಡಗಿಸಿಕೊಂಡಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅರೇಬಿಕ ಕಾಫಿ ಬೆಳೆಯಲಾಗುತ್ತದೆ. ಇದೀಗ ಶಾಂತಳ್ಳಿ, ಸುಂಟಿಕೊಪ್ಪ, ಮಾದಾಪುರ, ಶನಿವಾರಸಂತೆ, ಕೊಡ್ಲಿಪೇಟೆ ಭಾಗಗಳಲ್ಲಿ ಕಾಫಿ ಹಣ್ಣಾಗಿದ್ದು ಕೊಯ್ಲು ಶುರು ಮಾಡಲಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ೨೮,೫೯೦ ಹೆಕ್ಟರ್‌ನಲ್ಲಿ ಕಾಫಿ ಉತ್ಪಾದನೆಯಾಗುತ್ತಿದ್ದು ೨೨,೯೦೦ ಹೆ.ನಲ್ಲಿ ಅರೇಬಿಕಾ ಕಾಫಿ ಹಾಗೂ ೫೬೯೦ ಹೇ.ನಲ್ಲಿ ರೊಬೆಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಹವವಾನ, ನಿಗದಿತ ಸಮಯದಲ್ಲಿ ಮಳೆ, ಕಾಫಿ ಫಸಲು ಮತ್ತು ಉತ್ತಮ ಬೆಲೆ ಸಿಕ್ಕರೆ ಮಾತ್ರ ಬೆಳೆಗಾರ ಕಾಫಿ ತೋಟ ನಿರ್ವಹಣೆ ಮಾಡಬಹುದು. ಅದರೆ ಪ್ರಸಕ್ತ ವರ್ಷವೂ ಅಕಾಲಿಕ ಮಳೆಯು ಬೆಳೆಗಾರರ ನೆಮ್ಮದಿಯನ್ನು ಕಸಿದುಕೊಂಡಿದೆ.
ಕಾರ್ಮಿಕರಿಂದ ದುಪ್ಪಟ್ಟು ಕೂಲಿ ನಿಗದಿ: ಅಕಾಲಿಕ ಮಳೆಯಿಂದ ಕಚಡ, ರೌಂಡಿಂಗ್‌ನಂತಹ ಕೆಲಸ ಇನ್ನು ಬಾಕಿ ಇರುವಾಗಲೇ ಕಾಫಿ ಹಣ್ಣಾಗಿ ಕೊಯ್ಲಿಗೆ ಬಂದಿದೆ. ಆದರೆ ಕಾರ್ಮಿಕರ ಸಮಸ್ಯೆ ಎದುರಾಗಿದ್ದು, ಕಾರ್ಮಿಕರ ಬೇಡಿಕೆ ಬೆಳೆಗಾರರಿಗೆ ಹೆಚ್ಚಾದಾಗ ಅಧಿಕ ಕೂಲಿ ಕೊಟ್ಟು ಕೊಯ್ಲು ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸ್ಥಳೀಯ ಬೆಳಗಾರರು ಅಳಲು ವ್ಯಕ್ತಪಡಿಸಿದರು.
ಹತ್ತಾರು ಸಮಸ್ಯೆಗಳಿಂದ ಕಾಫಿ ಬೆಳೆಗಾರರು ಸಂಕಷ್ಟ ಪಡುವಂತಾಗಿದೆ. ಬಹುತೇಕ ಬೆಳೆಗಾರರು ತೋಟ ನಿರ್ವಹಣೆ ಸಾಧ್ಯವಾಗದೆ ಪಾಳು ಬಿಟ್ಟಿದ್ದಾರೆ. ಕೆಲವು ತೋಟಗಳು ರೋಗಪೀಡಿತವಾಗಿವೆ. ಒಂದು ವರ್ಷ ನಿರ್ವಹಣೆಯನ್ನು ಕೈ ಬಿಟ್ಟರೆ ಹತ್ತು ವರ್ಷ ಬಹಳ ಕಷ್ಟ ಪಡಬೇಕಾಗುತ್ತದೆ. ಒಟ್ಟಿನಲ್ಲಿ ಅಕಾಲಿಕ ಮಳೆ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಕಾಫಿಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾಫಿ ಕೊಯ್ಲು ಬಂತೆಂದರೆ ಬೆಳೆಗಾರರಿಗೆ ಕಾರ್ಮಿಕರ ಸಮಸ್ಯೆ ಕಾಡುತ್ತದೆ. ಪ್ರಸ್ತುತ ಕಾಫಿ ತೋಟಗಳಲ್ಲಿ ಕಚಡ ರೌಂಡಿಂಗ್ ಕೆಲಸ ಮಾಡಲಾಗುತ್ತಿದೆ. ಅದರೆ ಕಳೆದ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಕಾಫಿ ಬೇಗ ಹಣ್ಣಾಗಿದ್ದು, ಹಣ್ಣು ಕೊಯ್ಲು ಮಾಡಲು ಕಾರ್ಮಿಕರ ಸಮಸ್ಯೆ ಎದುರಾಗಿದೆ. ಇನ್ನೊಂದೆಡೆ ಇತ್ತೀಚೆಗೆ ಬೀಳುವ ಮಳೆಯಿಂದ ಕಾಫಿ ಒಣಗಿಸಲು ಸಮಸ್ಯೆ ಉಂಟಾಗಿದೆ. -ಗೌತಮ್, ಕಾಫಿ ಬೆಳೆಗಾರರು, ಕಿರಗಂದೂರು,
ಅಕಾಲಿಕ ಮಳೆಯಿಂದ ಅರೇಬಿಕಾ ಕಾಫಿ ಹಣ್ಣಾಗಿದ್ದು, ಇದರಿಂದ ಕಾಫಿ ಬೆಳೆಗಾರರು ತೊಂದರೆಗಿಡಾಗಿದ್ದಾರೆ. ಶೇ.೮೦ ರಷ್ಟು ಬೆಳೆಗಾರರು ಮುಂಗಾರು ಮತ್ತು ಹಿಂಗಾರು ಮಳೆಯನ್ನೇ ನಂಬಿ ಕಾಫಿ ಕೃಷಿ ಮಾಡುತ್ತಿದ್ದಾರೆ. ಪ್ರತಿ ವರ್ಷ ಅಕಾಲಿಕ ಮಳೆಯಿಂದ ಕಾಫಿ ಫಸಲಿಗೆ ಹಾನಿಯಾಗುತ್ತಿದೆ. ಅಕಾಲಿಕ ಮಳೆಯಿಂದ ಶೇ.೪೦ ರಷ್ಟು ಕಾಫಿ ಫಸಲಿಗೆ ಹಾನಿಯಾಗಿದೆ. ಸರ್ಕಾರ ಇದನ್ನು ಅರಿತು ಆದಷ್ಟು ಬೇಗ ಪರಿಹಾರ ನೀಡಬೇಕು. -ಕೆ.ಎಂ.ದಿನೇಶ್, ಅಧ್ಯಕ್ಷರು, ರೈತ ಸಂಘ ಸೋಮವಾರಪೇಟೆ ತಾಲ್ಲೂಕು ಘಟಕ.
ಅತಿವೃಷ್ಟಿ-ಅಕಾಲಿಕ ಮಳೆಯಿಂದ ನಷ್ಟವಾಗಿರುವ ಕಾಫಿ ತೋಟವನ್ನು ಸರಿಪಡಿಸಲು ಹಲವು ವರ್ಷಗಳು ಬೇಕು. ಕಳೆದ ಒಂದು ದಶಕದಿಂದ ಕಾಫಿ ಫಸಲು ಕಳೆದುಕೊಳ್ಳುತ್ತಿದ್ದೇವೆ. ಕಾಫಿ ವಿದೇಶಿ ವಿನಿಮುಂದಿಂದ ಸಾವಿರಾರು ಕೋಟಿ ರೂ. ಸರ್ಕಾರಕ್ಕೆ ಆದಾಯ ಬರುತ್ತಿದೆ. ಕಾಫಿ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಸರ್ಕಾರ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಬೇಕು. -ಮೋಹನ್ ಬೋಪಣ್ಣ, ಅಧ್ಯಕ್ಷರು, ಕಾಪಿ ಬೆಳೆಗಾರರ ಸಂಘ, ಸೋಮವಾರಪೇಟೆ,
ತಾಲೂಕಿನಲ್ಲಿ ಕಾಫಿ ಫಸಲು ಹಾನಿಯ ಬಗ್ಗೆ ಸರ್ವೇ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಬೆಳೆಗಾರರಿಗೆ ಪರಿಹಾರ ಸಿಗುತ್ತದೆ. ವಾಯುಭಾರ ಕುಸಿತದಿಂದ ಮಳೆ ಬೀಳುವ ಸಂಭವವಿದೆ. ಈ ವೇಳೆ ಕಾಫಿ ಕೊ್ಂಲುು ಮಾಡದಿರುವುದು ಒಳ್ಳೆಯದು. ಹೆಚ್ಚು ಬಿಸಿಲು ಇಲ್ಲದಿರುವುದರಿಂದ ಕಾಫಿ ಬೀಜ ಒಣಗಿಸಲು ಸಮಸ್ಯೆಯಾಗುತ್ತದೆ. -ಡಾ.ಚಂದ್ರಶೇಖರ್, ಉಪನೀರ್ದೇಶಕರು, ಕಾಫಿ ಮಂಡಳಿ ಸೋಮವಾರಪೇಟೆ