Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಿಎಂ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಿ : ಆರ್.ಸುಂದರ್ ಮನವಿ

ಚಾಮರಾಜನಗರ: ಡಿ.13 ರಂದು ನಗರ ಮತ್ತು ಹನೂರಿನಲ್ಲಿ ನಡೆಯುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಆಗಮಿಸಬೇಕೆಂದು ಪಕ್ಷದ ಜಿಲ್ಲಾಧ್ಯಕ್ಷ ಆರ್.ಸುಂದರ್ ಮನವಿ ಮಾಡಿದರು.
ಇದೊಂದು ಸರ್ಕಾರಿ ಕಾರ್ಯಕ್ರಮವೇ ಹೊರತು ಬಿಜೆಪಿ ಪಕ್ಷದಲ್ಲ. ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು ಮತ್ತು ಉದ್ಘಾಟಿಸುವರು. ಆದ್ದರಿಂದ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಜಿಲ್ಲೆಗೆ ಮುಖ್ಯಮಂತ್ರಿ ಅವರನ್ನು ಕರೆತರುವಲ್ಲಿ ಸಚಿವರಾದ ವಿ.ಸೋಮಣ್ಣ ಯಶಸ್ವಿಯಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ೨ನೇ ಬಾರಿ ಜಿಲ್ಲೆಗೆ ಆಗಮಿಸುತ್ತಿದ್ದು, ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡಲಿದ್ದಾರೆ. ಇವರಿಗೆ ಜಿಲ್ಲೆಯ ಜನತೆ ಗೌರವ ಪೂರ್ವಕವಾಗಿ ಸ್ವಾಗತ ಕೋರಬೇಕು ಎಂದರು.
ಮುಖ್ಯಮಂತ್ರಿ ಚಾಮರಾಜನಗರಕ್ಕೆ ಭೇಟಿ ನೀಡುವುದಿಲ್ಲ ಎಂಬ ಅಪವಾದವನ್ನು ತೊಡೆದು ಹಾಕಲು ಕರೆತರಲಾಗುತ್ತಿದೆ. ಜಿಲ್ಲಾಡಳಿತದ ಜೊತೆ ಪಕ್ಷದ ಮುಖಂಡರು ಮುಖ್ಯಮಂತ್ರಿಗಳ ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿದ್ದಾರೆ ಎಂದರು.
೧೫ ರಂದು ಕಚೇರಿ ಉದ್ಘಾಟನೆ: ನಗರದ ಕುಲುಮೆ ರಸ್ತೆಯಲ್ಲಿ ನಿರ್ಮಿಸಿರುವ ಬಿಜೆಪಿ ಕಾರ್ಯಾಲಯವನ್ನು ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ವರ್ಚುಯಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸುವರು. ೧೨ ಜಿಲ್ಲಾ ಬಿಜೆಪಿ ಕಾರ್ಯಾಲಯಗಳ ಉದ್ಘಾಟನೆಯಲ್ಲಿ ಚಾಮರಾಜನಗರವೂ ಒಂದಾಗಿದೆ ಎಂದು ತಿಳಿಸಿದರು.
ಸ್ಥಳೀಯರಿಗೆ ಆದ್ಯತೆ: ಚಾ.ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಸ್ಥಳೀಯರಿಗೆ ಟಿಕೆಟ್ ನೀಡುವ ಕುರಿತು ಪಕ್ಷದ ವರಿಷ್ಠರ ಮಟ್ಟದಲ್ಲಿ ಚರ್ಚೆಯಾಗಿದೆ. ಕ್ಷೇತ್ರದಲ್ಲಿ ನಡೆಯುವ ಪಕ್ಷದ ಎಲ್ಲ ಬೆಳವಣಿಗೆಗಳ ಕುರಿತು ವರಿಷ್ಠರ ಗಮನಕ್ಕೆ ತಂದು ಚರ್ಚಿಸಲಾಗಿದೆ. ಸ್ಥಳೀಯರಿಗೆ ಆದ್ಯತೆ ನೀಡಲು ಚಿಂತನೆ ನಡೆಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ವೃಷಬೇಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಆರ್.ಬಾಲರಾಜ್, ಮುಖಂಡರಾದ ನಾರಾಯಣಪ್ರಸಾದ್, ಮಂಜುನಾಥ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ