Mysore
24
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮುರುಘಾ ಶರಣರ ವಿರುದ್ಧ ದೂರು: ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿ ಪೊಲೀಸ್ ವಶಕ್ಕೆ

ಮೈಸೂರು: ಪೋಕ್ಸೋ ಕಾಯಿದೆಯಡಿ ಬಂಧನದಲ್ಲಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಎರಡನೇ ಪೋಕ್ಸೊ ಪ್ರಕರಣ ದಾಖಲಿಸಿದ ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರಿನಲ್ಲಿದ್ದ ಇವರನ್ನು ಪೊಲೀಸರು ವಿಚಾರಣೆಗಾಗಿ ಶುಕ್ರವಾರ ನಸುಕಿನಲ್ಲಿ ಚಿತ್ರದುರ್ಗಕ್ಕೆ ಕರೆದೊಯ್ದರು. ಮಹಿಳಾ ಪೊಲೀಸರು ಇವರನ್ನು ಇಡೀ ದಿನ ವಿಚಾರಣೆ ನಡೆಸಿದ್ದಾರೆ. ಶರಣರ ವಿರುದ್ಧ ಹೇಳಿಕೆ ನೀಡುವಂತೆ ಮಠದಲ್ಲಿ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿದ್ದ ತನ್ನ ಪುತ್ರಿಯರಿಗೆ ಕುಮ್ಮಕ್ಕು ನೀಡಿದ ಆರೋಪ ಈ ಮಹಿಳೆಯ ಮೇಲಿದೆ.
ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ನೀಡಿದ ದೂರು ಆಧರಿಸಿ ಮಠದ ವಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಶಿಕ್ಷಕ ಬಸವರಾಜೇಂದ್ರ ಎಂಬವರನ್ನು ಬಂಧಿಸಿದ್ದ ಪೊಲೀಸರು, ಶುಕ್ರವಾರ ಚಿತ್ರದುರ್ಗದಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಬಸವರಾಜನ್ ಪತ್ನಿ ಸೌಭಾಗ್ಯ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸ್ಥಳ ಮಹಜರು: ಶಿವಮೂರ್ತಿ ಶರಣರ ಫೋಟೊಗಳು ಕಳವಾಗಿರುವ ಚಿತ್ರದುರ್ಗ ಮಠದ ರಾಜಾಂಗಣದ ಸ್ಥಳ ಮಹಜರು ಶುಕ್ರವಾರ ನಡೆಯಿತು. ಪೊಲೀಸ್ ವಶದಲ್ಲಿರುವ ಆರೋಪಿ ಶ್ರೀನಿವಾಸ್ ಎಂಬುವರನ್ನು ಮಠಕ್ಕೆ ಕರೆದೊಯ್ದು ತನಿಖಾ ತಂಡ ಸ್ಥಳ ಮಹಜರು ಮಾಡಿತು.
ಜಾಮೀನು ಅರ್ಜಿ ವಜಾ: ಎರಡನೇ ಪೋಕ್ಸೊ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಇಬ್ಬರು ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ. ಆರೋಪಿಗಳಾದ ಮಹಾಲಿಂಗ ಮತ್ತು ಕರಿಬಸಪ್ಪ ಎಂಬುವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ