Mysore
33
clear sky

Social Media

ಶುಕ್ರವಾರ, 20 ಮಾರ್ಚ್ 2026
Light
Dark

ಮಲೆ ಮಹದೇಶ್ವರ ಬೆಟ್ಟ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿದ ಮಹಾರಥೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ  ಮಹೋತ್ಸವದ ಅಂಗವಾಗಿ ಗುರುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಆ ಮೂಲಕ ಯುಗಾದಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ನೇತೃತ್ವದಲ್ಲಿ ದೇಗುಲದಲ್ಲಿ ಬೆಳಗಿನ ಜಾವ 4ರಿಂದ 5ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಿದ ಬಳಿಕ ಮಹಾಮಂಗಳಾರತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಬೇಡಗಂಪಣ ಅರ್ಚಕರು ಮೊದಲು ಬ್ರಹ್ಮ ದಾರದ ಪೂಜೆ ನೆರವೇರಿಸಿ ತೇರಿನ ಸುತ್ತ ಪ್ರದಕ್ಷಿಣೆ ಹಾಕಿ ಅರಿಶಿಣ ದಾರವನ್ನು ಕಟ್ಟಲಾಯಿತು. ಸಂಪ್ರದಾಯದಂತೆ ತಳಿಗೆ ಮನೆಯ ಪೂಜೆ ನೆರವೇರಿಸಿ ಲಾಯಿತು. ದೇವರ ಮೂರ್ತಿಯನ್ನು ಬಿಳೆಕುದುರೆ ವಾಹನ ದಲ್ಲಿ ಕೂರಿಸಿ ಛತ್ರಿ, ಚಾಮರ ಹಾಗೂ ಮಂಗಳವಾದ್ಯ ದೊಂದಿಗೆ ದೇಗುಲ ಹಾಗೂ ತೇರಿನ ಸುತ್ತಲು 3 ಬಾರಿ ಪ್ರದಕ್ಷಿಣೆ ಹಾಕಲಾಯಿತು.

ಸಂಪ್ರದಾಯದಂತೆ ಮಹಾರಥೋತ್ಸವಕ್ಕೂ ಮುನ್ನಾ ಸಾಲೂರು ಶ್ರೀಗಳ ಪಾದಪೂಜೆಯನ್ನು ಬೇಡಗಂಪಣ ಅರ್ಚಕರು ನೇರವೇರಿಸಿದರು. ಬೇಡಗಂಪಣ ಸಮುದಾಯದ 108 ಮಕ್ಕಳು ಬೆಲ್ಲದಾರತಿಯನ್ನು ಮಹಾರಥೋತ್ಸವಕ್ಕೆ ಸಮರ್ಪಿಸಿದರು.

ಮಹಾರಥೋತ್ಸವದ ನಂತರ ಸಾಲೂರು ಬೃಹನ್ಮಠದ ಶ್ರೀಗಳ ಗುರು ಬ್ರಹ್ಮೋತ್ಸವ ಜರುಗಿತು

ಗುರು ಬ್ರಹ್ಮೋತ್ಸವದ ನಂತರ ಅನ್ನ ಬ್ರಹ್ಮೋತ್ಸವವು ನಡೆಯಿತು. ಎಲ್ಲಾ ಧಾರ್ಮಿಕ ಪೂಜಾ ಕೈಂಕರ್ಯಗಳು ಸಂಪನ್ನಗೊಂಡ ನಂತರ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಡಾ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರು ಭಕ್ತರಿಗೆ ಬೇವು ಬೆಲ್ಲ ವಿತರಿಸಿದರು.

ಪ್ರಾಧಿಕಾರದ ಕಾರ್ಯದರ್ಶಿಗಳಾದ ಎಈ ರಘು ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಶಿಧರ್ ಮತ್ತು ಕೊಳ್ಳೇಗಾಲ ಉಪ ವಿಭಾಗದ ಉಪಾಧಿಕ್ಷಕರಾದ ಧರ್ಮೇಂದ್ರ ಹಾಗೂ ಬೇಡಗಂಪಣ ಸಮುದಾಯದ ಅರ್ಚಕರು ಮುಖಂಡರು ಶ್ರೀ ಕ್ಷೇತ್ರದ ಸದ್ಭಕ್ತರ ಸಮಕ್ಷಮದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

 

Tags:
error: Content is protected !!